×
Ad

ರಾಜ್ಯ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ : ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಂಜೀವ ಮಠಂದೂರು ಆರೋಪ

Update: 2016-04-02 18:25 IST

ಉಪ್ಪಿನಂಗಡಿ: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಜನಸಾಮಾನ್ಯರ ಹಕ್ಕನ್ನು ಧಮನಿಸುವ ಕಾರ್ಯ ನಡೆಸುತ್ತಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು ಆಕ್ರೋಶ ವ್ಯಕ್ತಪಡಿಸಿದರು.
 ಕುಮ್ಕಿ ಹಕ್ಕನ್ನು ರೈತರಿಗೆ ನೀಡಲು ಆಗ್ರಹಿಸಿ, ವಿದ್ಯುತ್ ಕಡಿತ ಹಾಗೂ ಮರಳು ನೀತಿಯನ್ನು ವಿರೋಧಿಸಿ ಹಾಗೂ 94ಸಿಯಲ್ಲಾಗುತ್ತಿರುವ ಕಮಿಷನ್ ದಂಧೆಯನ್ನು ಖಂಡಿಸಿ ಬಿಜೆಪಿ ವತಿಯಿಂದ ಇಲ್ಲಿನ ಬಜತ್ತೂರು ಗ್ರಾಮ ಕರಣಿಕರ ಕಚೇರಿಯ ಮುಂದೆ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಅನಾದಿ ಕಾಲದಿಂದಲೂ ಕುಮ್ಕಿ ಹಕ್ಕು ರೈತರ ಕೈಯಲ್ಲಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ 4.30 ಲಕ್ಷ ಖದೀಮ್ ವರ್ಗದವರು ಕುಮ್ಕಿ ಹಕ್ಕನ್ನು ಅನುಭವಿಸಿಕೊಂಡು ಬರುತ್ತಿದ್ದಾರೆ ಎಂದು ಸಂಘ- ಸಂಸ್ಥೆಗಳ ವರದಿಗಳು ತಿಳಿಸಿವೆ. ಆದರೆ ಇದೀಗ ಕುಮ್ಕಿ ಹಕ್ಕನ್ನು ರೈತರ ಕೈಯಿಂದ ಕಸಿದುಕೊಳ್ಳಲು ಕಾಂಗ್ರೆಸ್ ಸರಕಾರ ಮುಂದಾಗಿದೆ. 2013ರಲ್ಲಿ ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದಾಗ ಕುಮ್ಕಿ ಹಕ್ಕಿಗಾಗಿ ಕಾನೂನೊಂದನ್ನು ರೂಪಿಸಿತ್ತು. ಅದರಂತೆ 5 ಎಕ್ರೆವರೆಗಿನ ಕುಮ್ಕಿಯನ್ನು ರೈತರಿಗೆ ಮಂಜೂರುಗೊಳಿಸಿ, ಅದಕ್ಕಿಂತಲೂ ಹೆಚ್ಚು ಕುಮ್ಕಿಯಿದ್ದರೆ, ಅವರ ವರ್ಗ ಜಾಗದ ಕಂದಾಯ ತೆರಿಗೆ ಶೇ.100ರಷ್ಟು ತೆರಿಗೆ ಪಾವತಿಸಿ ಕುಮ್ಕಿಯನ್ನು ಸ್ವಾಧೀನ ಪಡಿಸುವ ಹಕ್ಕನ್ನು ಅದರಲ್ಲಿ ರೈತರಿಗೆ ನೀಡಿತ್ತು. ಅಲ್ಲದೇ, ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಕಮಿಟಿಯೊಂದನ್ನು ಮಾಡಿ ಕುಮ್ಕಿ ಹಕ್ಕನ್ನು ಗಜೆಟ್ ನೊಟೀಫಿಕೇಶ್‌ನ ಹೊರಡಿಸಿ ರೈತರಿಗೆ ಮಂಜೂರುಗೊಳಿಸುವ ಪ್ರಕ್ರಿಯೆಗೆ ಮುಂದಡಿಯಿಟ್ಟಿತ್ತು. ಆದರೆ ಬಳಿಕ ಬಿಜೆಪಿ ಸರಕಾರ ಬಿದ್ದು ಹೋಗಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರ ಪಡೆದುಕೊಂಡಿತಾದರೂ, ಇದರ ಅವಧಿಯಲ್ಲಿ ಈ ರೈತ ಪರವಾದ ಈ ಕಾನೂನನ್ನು ಜಾರಿಗೊಳಿಸಲೇ ಇಲ್ಲ. ಇದರಿಂದ ಇಂದು ರೈತನ ನೆತ್ತಿಯ ಮೇಲೆ ಆತಂಕದ ತೂಗುಗತ್ತಿ ನೇತಾಡುವಂತಾಗಿದೆ ಎಂದರು.
94ಸಿಯೆನ್ನುವುದು ಕಾಂಗ್ರೆಸ್ ಕಾರ್ಯಕರ್ತರಿಗೆ, ಅಧಿಕಾರಿಗಳಿಗೆ ಹಣ ಮಾಡುವ ಅಕ್ಷಯ ಪಾತ್ರೆಯಂತಾಗಿದೆ. ಲಂಚ ಕೊಟ್ಟವರಿಗೆ ಮಾತ್ರ ಇಲ್ಲಿ ಹಕ್ಕು ಪತ್ರ ಲಭ್ಯವಾಗುತ್ತದೆ. ಈವೆರೆಗೆ ತಾಲೂಕಿನಲ್ಲಿ ಎಷ್ಟು ಜನ 94ಸಿಯಡಿ ಅರ್ಜಿ ಹಾಕಿದ್ದಾರೆ. ಎಷ್ಟು ಜನರಿಗೆ ನೀಡಲಾಗಿದೆ ಎಂದು ತಾಕತ್ತಿದ್ದರೆ ಶಾಸಕಿಯವರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಶ್ವೇತಪತ್ರ ಹೊರಡಿಸಲಿ ಎಂದ ಸಂಜೀವ ಮಠಂದೂರು, ಮರಳು ಮಾಫಿಯಾಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನೂತನ ಮರಳು ನೀತಿ ಜಾರಿಗೊಳಿಸಿದ್ದು, ಇದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕೈವಾಡವೂ ಇದೆ. ಇದರಿಂದ ನದಿ ತೀರದಲ್ಲಿರುವ ಇಲ್ಲಿನ ಜನತೆಗೆ ಮರಳು ಸಿಗದೆ, ಬೆಂಗಳೂರು, ಮೈಸೂರು ಕಡೆ ಕಳ್ಳಮಾರ್ಗದ ಮೂಲಕ ಸಾಗುತ್ತಿದೆ ಎಂದು ಆರೋಪಿಸಿದರಲ್ಲದೆ, ಸರಕಾರಕ್ಕೆ ಜನಸಾಮಾನ್ಯರ ಮೇಲೆ ಕಾಳಜಿ ಇಲ್ಲದಿರುವುದರಿಂದ ಕತ್ತಲೆ ಭಾಗ್ಯವನ್ನೂ ಅನುಭವಿಸಬೇಕಾಗಿದೆ ಎಂದು ದೂರಿದರು.
ಬಿಜೆಪಿಯ ಮಂಡಲ ಉಪಾಧ್ಯಕ್ಷ ಕೇಶವ ಗೌಡ ಬಜತ್ತೂರು ಮಾತನಾಡಿ, ಬಿಜೆಪಿ ಸರಕಾರದ ಅವಧಿಯಲ್ಲಿ ಸುವರ್ಣ ದಿನಗಳನ್ನು ಅನುಭವಿಸಿದ್ದ ರಾಜ್ಯವೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಕುಮ್ಕಿ ಹಕ್ಕಿನ ವಿಷಯವು ನ್ಯಾಯಾಲಯದಲ್ಲಿದ್ದಾಗ ರೈತರ ಪರ ನಿಂತು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ರಾಜ್ಯ ಸರಕಾರದಿಂದಾಗಿಲ್ಲ. ಇದರಿಂದಾಗಿ ನಮ್ಮ ಕುಮ್ಕಿಯನ್ನು ಸರಕಾರ ಯಾವಾಗ ವಶಪಡಿಸಿಕೊಳ್ಳುತ್ತದೆಯೋ ಎಂಬ ಆತಂಕದಿಂದ ರೈತರು ದಿನದೂಡುವಂತಾಗಿದೆ. ವಿದ್ಯುತ್ ಸಮಸ್ಯೆ ಮಿತಿಮೀರಿದ್ದು, ಸಮಸ್ಯೆ ವಿರುದ್ಧ ಧ್ವನಿಯೆತ್ತಿದವರ ಧ್ವನಿಯಡಗಿಸಲು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸಿದ್ಧರಾಗಿದ್ದಾರೆ. 94ಸಿಯನ್ನು ಬಿಜೆಪಿ ಸರಕಾರ ಅವಧಿಯಲ್ಲಿ ಮಾಡಲಾಗಿತ್ತಾದರೂ, ಈ ಮಸೂದೆಯನ್ನು ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್‌ರ ಕುತಂತ್ರದಿಂದ ಅನುಷ್ಠಾನಕ್ಕೆ ತರಲಾಗಿಲ್ಲ. ಇದೀಗ ಕಾಂಗ್ರೆಸ್ ಅನುಷ್ಠಾನಕ್ಕೆ ತಂದರೂ ಅದು ಕಮಿಷನ್ ದಂಧೆಯಾಗಿ ಮಾರ್ಪಾಡಾಗಿದೆ. ಜನಸಾಮಾನ್ಯರಿಗೆ ಮರಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಬಳಿಕ ತಮ್ಮ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಗ್ರಾಮಕರಣಿಕ ಸುನೀಲ್ ಕುಮಾರ್ ಮೂಲಕ ರಾಜ್ಯ ಸರಕಾರಕ್ಕೆ ಕಳುಹಿಸಿದರು.
ಪ್ರತಿಭಟನೆಯಲ್ಲಿ ಬಜತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್‌ಕುಮಾರ್ ಪಂರ್ದಾಜೆ, ಉಪಾಧ್ಯಕ್ಷೆ ಸುಜಾತ, ಸದಸ್ಯರಾದ ಮಾಧವ ಪೂಜಾರಿ, ಆನಂದ ಕೆ.ಎಸ್., ಗಣೇಶ್ ಕಿಂಡೋವು, ಉಪ್ಪಿನಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ಯಶವಂತ ಜಿ., ಪ್ರಮುಖರಾದ ನೇಮಣ್ಣ ಗೌಡ, ಪುಷ್ಪಾಕರ ಅತ್ತಾಜೆ, ತಾರಾನಾಥ ಪಂರ್ದಾಜೆ, ಧನಂಜಯ ಬೆದ್ರೋಡಿ, ನವೀನ್ ಪಡ್ಪು, ಜಯಂತ ಬೆದ್ರೋಡಿ, ವಿಶ್ವನಾಥ ಗೌಡ ಪಿಜಕ್ಕಳ, ಜಗದೀಶ್ ರಾವ್ ಮಣಿಕ್ಕಳ, ಕಮಲಾಕ್ಷಿ, ಗುರುನಾಥ್, ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಗಂಗಾಧರ ಪಿ.ಎನ್. ಸ್ವಾಗತಿಸಿದರು. ಗಣೇಶ್ ಕುಲಾಲ್ ಸ್ವಾಗತಿಸಿದರು.


ರಾಜ್ಯ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ನಡೆಸುವ ಪ್ರತಿಭಟನೆಗೆ ಬಜತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚಾಲನೆ ನೀಡಲಾಗಿದ್ದು, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಪ್ರತಿಭಟನೆ ನಡೆದ ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು 25,000ಕ್ಕೂ ಅಧಿಕ ಜನ ಸೇರಿ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಯನ್ನು ಪ್ರತಿಭಟಿಸಲಾಗುವುದು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News