‘ವಂದೇ ಮಾತರಂ’ನಿಜವಾದ ರಾಷ್ಟ್ರಗೀತೆ:ಆರೆಸ್ಸೆಸ್

Update: 2016-04-02 14:08 GMT

ಮುಂಬೈ,ಎ.2: ಸಂವಿಧಾನವು ಕಡ್ಡಾಯಗೊಳಿಸಿರುವ ಜನ ಗಣ ಮನಕ್ಕೆ ಹೋಲಿಸಿದರೆ ‘ವಂದೇ ಮಾತರಂ’ನಿಜವಾದ ರಾಷ್ಟ್ರಗೀತೆಯಾಗಿದೆ ಎಂದು ಆರೆಸ್ಸೆಸ್‌ನ ಪ್ರಧಾನ ಕಾರ್ಯದರ್ಶಿ ಭೈಯ್ಯೆಜಿ ಜೋಷಿ ಹೇಳಿದ್ದಾರೆ.

ಜನ ಗಣ ಮನ ಇಂದು ನಮ್ಮ ರಾಷ್ಟ್ರಗೀತೆಯಾಗಿದೆ. ಅದನ್ನು ಗೌರವಿಸಬೇಕು. ಅದು ಇತರ ಯಾವುದೇ ಭಾವನೆಗಳನ್ನು ಕೆದಕಲು ಕಾರಣವೇ ಇಲ್ಲ ಎಂದ ಅವರು, ಆದರೆ ಅದು ಸಂವಿಧಾನವು ನಿರ್ಧರಿಸಿರುವ ರಾಷ್ಟ್ರಗೀತೆಯಾಗಿದೆ. ಅದರ ನಿಜವಾದ ಅರ್ಥವನ್ನು ಪರಿಗಣಿಸಿದರೆ ವಂದೇ ಮಾತರಂ ರಾಷ್ಟ್ರಗೀತೆಯಾಗಿದೆ ಎಂದು ಹೇಳಿದರು.

ಶುಕ್ರವಾರ ಇಲ್ಲಿಯ ದೀನದಯಾಳ ಉಪಾಧ್ಯಾಯ ಸಂಶೋಧನಾ ಸಂಸ್ಥೆಯಲ್ಲಿ ಮಾತನಾಡುತ್ತಿದ್ದ ಅವರು,ಜನ ಗಣ ಮನದಲ್ಲಿ ರಾಜ್ಯವನ್ನು ಗಮನದಲ್ಲಿಟ್ಟುಕೊಂಡು ಭಾವನೆಗಳನ್ನು ವ್ಯಕ್ತಪಡಿಸಲಾಗಿದೆ. ಆದರೆ ವಂದೇ ಮಾತರಂನಲ್ಲಿ ರಾಷ್ಟ್ರೀಯ ಭಾವನೆಗಳು ವ್ಯಕ್ತಗೊಂಡಿವೆ. ಇದು ಇವೆರಡೂ ಗೀತೆಗಳ ನಡುವಿನ ವ್ಯತ್ಯಾಸವಾಗಿದೆ. ಎರಡೂ ಗೀತೆಗಳು ಗೌರವಕ್ಕೆ ಅರ್ಹವಾಗಿವೆ ಎಂದು ಹೇಳಿದರು.

ವಿವಾದದ ಇನ್ನೊಂದು ಕಿಡಿ

ವಂದೇ ಮಾತರಂ ಗೀತೆಗೆ ರಾಷ್ಟ್ರಗೀತೆಯ ಪಟ್ಟ ನೀಡಿದ ಜೋಷಿ ಅಷ್ಟಕ್ಕೇ ಸುಮ್ಮನಾಗಲಿಲ್ಲ. ತ್ರಿವರ್ಣ ಧ್ವಜವು ಕೇಸರಿ ಧ್ವಜಕ್ಕಿಂತ ಭಿನ್ನವೇನಲ್ಲ, ಹೀಗಾಗಿ ಕೇಸರಿ ಧ್ವಜವನ್ನು ರಾಷ್ಟ್ರಧ್ವಜವೆಂದು ಗೌರವಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳುವ ಮೂಲಕ ಇನ್ನೊಂದು ವಿವಾದವನ್ನು ಸೃಷ್ಟಿಸಿದರು.

ಆರೆಸ್ಸೆಸ್ ಈ ಹೇಳಿಕೆಯೊಂದಿಗೆ ಹೊಸ ವಿವಾದಕ್ಕೆ ನಾಂದಿ ಹಾಡಿದೆ. ಈ ಹೇಳಿಕೆ ಖಂಡಿತವಾಗಿಯೂ ಪ್ರತಿಪಕ್ಷಗಳಿಗೆ ಪಥ್ಯವಾಗುವುದಿಲ್ಲ. ರಾಜಕೀಯ ಪಕ್ಷಗಳು ಮಾತ್ರವಲ್ಲ, ಆರೆಸ್ಸೆಸ್‌ನ್ನು ತರಾಟೆಗೆತ್ತಿಕೊಂಡಿರುವ ಸಾಮಾಜಿಕ ಕಾರ್ಯಕರ್ತರು, ಇದು ರಾಷ್ಟ್ರಧ್ವಜಕ್ಕೆ ಮಾಡಿರುವ ಅವಮಾನವಾಗಿದೆ ಮತ್ತು ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಅವಮಾನಿಸಿದ್ದಕ್ಕಾಗಿ ಸಂಬಂಧಿತ ವ್ಯಕ್ತಿಯ ವಿರುದ್ಧ ಐಪಿಸಿಯಡಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕಾಶ್ಮೀರಿ ಪ್ರತ್ಯೇಕತಾವಾದಿಗಳು ಮತ್ತು ಆರೆಸ್ಸೆಸ್ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಜೆಡಿಯು ಕುಟುಕಿದೆ. ಕಾಶ್ಮೀರಿ ಪ್ರತ್ಯೇಕತಾವಾದಿಗಳು ರಾಷ್ಟ್ರಧ್ವಜವನ್ನು ಗೌರವಿಸುವುದಿಲ್ಲ,ಅದೇ ರೀತಿ ಜೋಷಿಯವರ ಹೇಳಿಕೆಯೂ ರಾಷ್ಟ್ರಧ್ವಜಕ್ಕೆ ಅಷ್ಟೇ ಅವಮಾನವನ್ನು ಮಾಡಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News