ಮಂಗಳೂರು : ವಿಧಾನಸಭಾ ಕ್ಷೇತ್ರದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಪ್ರತಿಭಟನೆ
ಉಳ್ಳಾಲ: ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ಅನಿಯಮಿತವಾಗಿ ವಿದ್ಯುತ್ ಸ್ಥಗಿತ ಮಾಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಸರಕಾರ ಚೆಲ್ಲಾಟವಾಡುತ್ತಿದೆ ಎಂದು ಉಳ್ಳಾಲ ವಿಧಾನ ಸಭಾ ಕ್ಷೇತ್ರದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಸ್.ಮುತ್ತಲಿಬ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ಅನಿಯಮಿತ ವಿದ್ಯುತ್ ಸ್ಥಗಿತ ಮತ್ತು ವಿದ್ಯುತ್ ಬೆಲೆ ಏರಿಕೆಯನ್ನು ಖಂಡಿಸಿ ಮಂಗಳೂರು ವಿಧಾನಸಭಾ ಕ್ಷೇತ್ರದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ಮೆಸ್ಕಾಂ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಹವಾನಿಯಂತ್ರಿತ ಕಾರಿನಲ್ಲಿ ಓಡಾಡುವ ಸಚಿವರು ಒಮ್ಮೆ ಕರ್ನಾಟಕದ ಜನರ ಸಮಸ್ಯೆಯನ್ನು ಅರಿತುಕೊಳ್ಳಿ. ಜಿಲ್ಲೆಯ ಜನರು ಕಂಡರಿಯದ ಬೇಗೆಯಿಂದ ಬಳಲುತ್ತಿರುವ ಸಂದರ್ಭದಲ್ಲಿ ಪವರ್ ಕಟ್ ಒಂದು ಸಮಸ್ಯೆಯಾಗಿದೆ. ಈ ನಡುವೆ ದಿನಕ್ಕೆ ಮೂರು ಹೊತ್ತಿನ ಊಟಕ್ಕೆ ಪರದಾಡುವ ಜನರಿಗೆ ವಿದ್ಯುತ್ ಬೆಲೆಯೇರಿಕೆ ಇನ್ನೊಂದು ದೊಡ್ಡ ಸಮಸ್ಯೆಯಾಗಿದೆ. ಈ ಬಗ್ಗೆ ಸರಕಾರ ಎಚ್ಚೆತ್ತುಕೊಂಡು ಜನರ ಸಮಸ್ಯೆಗಳಿಗೆ ಸ್ಪಂಧಿಸದೇ ಇದ್ದಲ್ಲಿ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಹೇಳಿದರು. ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕ್ಷೇತ್ರಾಧ್ಯಕ್ಷ ಸಿ.ಎಚ್.ಸಲಾಂ, ಕ್ಷೇತ್ರ ಕಾರ್ಯದರ್ಶಿ ರಿಯಾರ್, ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಅಝಿರ್, ಇಫ್ತಿಕರ್, ಉಪಾಧ್ಯಕ್ಷ ಮುಝಂಬಲ್, ಉಳ್ಳಾಲ ಸಮಿತಿ ಸದಸ್ಯ ಹನೀಫ್ ತಲಪಾಡಿ, ಖಲೀಲ್ ಎಂ.ಎಚ್, ಸಂಶುದ್ಧೀನ್ ಡಿ.ಕೆ, ಅಬ್ದುಲ್ ರಹೀಂ, ಅಫ್ಝಲ್ ಪಿಲಾರ್, ಅಬ್ದುಲ್ ರಹಿಮಾನ್ ಕೋಟೆಕಾರು, ಫೈಝಲ್ ಅಳೇಕಲ, ಅಬ್ದುಲ್ ರಹೀಂ ಉಳ್ಳಾಲ ಉಪಸ್ಥಿತರಿದ್ದರು.