ಬರ ಪೀಡಿತ ಪ್ರದೇಶಗಳಿಗೆ ರೈಲಲ್ಲಿ ನೀರು
ಹೊಸದಿಲ್ಲಿ, ಎ.2: ಭಾರತೀಯ ರೈಲ್ವೆಯು ದೇಶದ ಬರಗಾಲ ಪೀಡಿತ ಪ್ರದೇಶಗಳಿಗೆ ನೀರನ್ನು ಸಾಗಿಸಲಿದೆಯೆಂದು ಅಧಿಕೃತ ಹೇಳಿಕೆಯೊಂದು ಶುಕ್ರವಾರ ತಿಳಿಸಿದೆ.
ಈ ಸಂಬಂಧ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ರೈಲ್ವೆ ಆಡಳಿತಕ್ಕೆ ರೈಲ್ವೆ ಸಚಿವ ಸುರೇಶ್ ಪ್ರಭು ನಿರ್ದೇಶನ ನೀಡಿದ್ದಾರೆಂದು ಅದು ಹೇಳಿದೆ.
ಮಹಾರಾಷ್ಟ್ರ ಸರಕಾರ ಹಾಗೂ ಮಧ್ಯ ರೈಲ್ವೆ ವಲಯಗಳ ಮನವಿಯಂತೆ ರೈಲ್ವೆ ಸಚಿವಾಲಯವು ಲಾತೂರು ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ನೀರನ್ನು ತುಂಬುವ ಹಾಗೂ ಪೂರೈಸುವ ಉದ್ದೇಶಕ್ಕಾಗಿ ತಲಾ 50 ಟ್ಯಾಂಕರ್‌ನಂತಹ ಬೋಗಿಗಳುಳ್ಳ 2 ಸರಕು ರೈಲುಗಳ ಏರ್ಪಾಡನ್ನು ಮಾಡಿದೆಯೆಂದು ಹೇಳಿಕೆ ತಿಳಿಸಿದೆ.
ಕುಡಿಯುವ ನೀರನ್ನು ತುಂಬಿಸುವುದಕ್ಕಾಗಿ ವ್ಯಾಗನ್‌ಗಳ ಸ್ಟೀಮ್‌ಕ್ಲೀನಿಂಗ್ ನಡೆಸುವಂತೆ ರೈಲ್ವೆಯ ಕೋಟಾ ಕಾರ್ಯಾಗಾರಕ್ಕೆ ನಿರ್ದೇಶನ ನೀಡಲಾಗಿದೆ. ಎರಡು ಸರಕು ರೈಲುಗಳನ್ನು ಸೋಲಾಪುರ ವಿಭಾಗದ ಪಂಢರಾಪುರ-ಲಾತೂರು ವಲಯದಲ್ಲಿ ನಿಯೋಜಿಸಲಾಗುವುದು.
ಮೊದಲ ರೈಲಿನ 50 ವ್ಯಾಗನ್‌ಗಳ ಸ್ಟೀಮ್ ಕ್ಲೀನಿಂಗ್ ಕೋಟಾ ಕಾರ್ಯಾಗಾರದಲ್ಲಿ ನಡೆದು ಅದು ಎ.8ಕ್ಕೆ ನೀರು ಸಾಗಾಟಕ್ಕೆ ಸಿದ್ಧವಾಗಲಿದೆ. 2ನೆ ರೈಲು ಎ.15ರೊಳಗೆ ಸಜ್ಜಾಗುವ ನಿರೀಕ್ಷೆಯಿದೆ.
2016-17ನೆ ವಿತ್ತ ವರ್ಷದ ಬೇಸಗೆಯ ಋತುವಿನಲ್ಲಿ ಅವುಗಳನ್ನು ಲಾತೂರಿನಲ್ಲಿ ನಿಯೋಜಿಸಲಾಗುವುದು. ಅಗತ್ಯಕ್ಕೆ ತಕ್ಕಂತೆ ಅವುಗಳ ಸಂಚಾರದ ಸರದಿಯನ್ನು ವ್ಯವಸ್ಥೆ ಮಾಡಲಾಗುವುದು.
ಈ ವರ್ಷದ ಆರಂಭದಲ್ಲಿ, ರಾಜಸ್ಥಾನ ಸರಕಾರ ಹಾಗೂ ವಾಯವ್ಯ ರೈಲ್ವೆ ವಲಯಗಳ ಬೇಡಿಕೆಯಂತೆ ನಝರಾಬಾದ್‌ನಿಂದ ಅಜ್ಮೀರ್ ವಿಭಾಗಕ್ಕೆ ನೀರು ಸಾಗಿಸಲು ಹಲವು ಗೂಡ್ಸ್ ರೈಲುಗಳನ್ನು ನಿಯೋಜಿಸಲಾಗಿತ್ತು.
ಪ್ರತಿ ವ್ಯಾಗನ್ 55 ಸಾವಿರ ಲೀ. ಸಾಮರ್ಥ್ಯ ಹೊಂದಿದ್ದು, ಒಂದು ರೈಲು ಸುಮಾರು 27.5 ಲಕ್ಷ ಲೀ. ನೀರು ಸಾಗಿಸಬಲ್ಲುದು.