×
Ad

ಹೈಕೋರ್ಟ್ ಆದೇಶದ ಹೊರತಾಗಿಯೂ ಶನಿಮಂದಿರ ಪ್ರವೇಶಕ್ಕೆ ಮಹಿಳೆಯರಿಗೆ ತಡೆ

Update: 2016-04-02 23:26 IST

ಮುಂಬೈ,ಎ.2: ದೇವಾಲಯದೊಳಗೆ ಪ್ರವೇಶ ಮಹಿಳೆಯರ ಮೂಲಭೂತ ಹಕ್ಕೆಂದು ಬಾಂಬ್ ಹೈಕೋರ್ಟ್ ತೀರ್ಪು ನೀಡಿದ ಒಂದು ದಿನದ ಬಳಿಕ, ತೃಪ್ತಿ ದೇಸಾಯಿ ನೇತೃತ್ವದಲ್ಲಿ ಸುಮಾರು 25 ಮಂದಿ ಮಹಿಳೆಯರು ಇಂದು ಮಹಾರಾಷ್ಟ್ರದ ಶನಿಶಿಂಗನಾಪುರದ ದೇವಾಲಯದ ಆವರಣವನ್ನು ಪ್ರವೇಶಿಸಿದ್ದಾರೆ. ಆದರೆ, ಸ್ಥಳೀಯರು ಅವರನ್ನು ಗರ್ಭಗುಡಿಯೊಳಗೆ ಹೋಗಿ ಪ್ರಾರ್ಥನೆ ಸಲ್ಲಿಸದಂತೆ ತಡೆದಿದ್ದಾರೆ.

ದೇಸಾಯಿ ನೇತೃತ್ವದ ಭೂಮಾತಾ ರಣರಾಗಿಣಿ ಬ್ರಿಗೇಡ್‌ನ ಸದಸ್ಯೆಯರು ಪಾರಂಪರಿಕವಾಗಿ ಮಹಿಳೆಯರ ಪ್ರವೇಶ ನಿಷೇಧವಿರುವ ಗರ್ಭಗುಡಿಯೊಳಗೆ ಹೋಗಲು ಯತ್ನಿಸಿದಾಗ ಉದ್ರಿಕ್ತ ಸ್ಥಳೀಯ ಮಹಿಳೆಯರು ಅವರನ್ನು ಹೊರ ನೂಕಿದರು.
ತಾವು ಹಿಂದಿರುಗುವುದಿಲ್ಲ. ತಮ್ಮಲ್ಲಿ ನ್ಯಾಯಾಲಯದ ಆದೇಶವಿದೆ. ಅಗತ್ಯವಾದಲ್ಲಿ ತಾವು ಗೃಹ ಸಚಿವ ಹಾಗೂ ಮುಖ್ಯಮಂತ್ರಿಯ ವಿರುದ್ಧ ಎಫ್‌ಐಆರ್ ದಾಖಲಿಸುತ್ತೇವೆಂದು ಅಹ್ಮದಾಬಾದ್‌ನ ಪ್ರಸಿದ್ಧ ದೇವಾಲಯದೊಳಗೆ ಪ್ರವೇಶಿಸಲು ಪಣ ತೊಟ್ಟಿರುವ ತೃಪ್ತಿ ದೇಸಾಯಿ ಹೇಳಿದರು.
ಪೊಲೀಸರೇನು ಮಾಡುತ್ತಿದ್ದಾರೆ? ತಮಗೆ ರಕ್ಷಣೆ ನೀಡುವಂತೆ ನ್ಯಾಯಾಲಯ ಅವರಿಗೆ ನಿರ್ದೇಶನ ನೀಡಿದೆಯೆಂದು ಅವರು ರಾಜ್ಯಸರಕಾರವನ್ನು ಪ್ರಶ್ನಿಸಿದರು.
ದೇವಾಲಯವೊಂದರಲ್ಲಿ ಪ್ರಾರ್ಥನೆ ಸಲ್ಲಿಸುವುದು ಮಹಿಳೆಯರ ಮೂಲಭೂತ ಹಕ್ಕು . ಅವರ ಹಕ್ಕನ್ನು ರಕ್ಷಿಸುವುದು ಸರಕಾರದ ಮೂಲಭೂತ ಕರ್ತವ್ಯವೆಂದು ಬಾಂಬೆ ಹೈಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.
ದೇವಾಲಯ ಪ್ರವೇಶವನ್ನು ತಡೆಯುವವರಿಗೆ 6 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸುವ ಕಾನೂನೊಂದನ್ನು ಜಾರಿಗೊಳಿಸುವ ಮೂಲಕ ನ್ಯಾಯಾಲಯದ ಆದೇಶ ಪಾಲಿಸಲು ಎಲ್ಲ ಕ್ರಮ ಕೈಗೊಳ್ಳುವ ಭರವಸೆಯನ್ನು ಮಹಾರಾಷ್ಟ್ರ ಸರಕಾರ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News