ಉಡುಪಿ: ಡಾ.ಕೆ.ಪಿ.ಭಟ್‌ಗೆ ‘ಕೇಶವ ಪ್ರಶಸ್ತಿ’ ಪ್ರದಾನ
ಉಡುಪಿ, ಎ.2: ಉಡುಪಿ ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡಮಿ ಆಫ್ ಜನರಲ್ ಎಜುಕೇಶನ್‌ನ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಮುದ್ದಣ ಸಾಹಿತ್ಯೋತ್ಸವ ಆಯೋಜಿಸಲಾಗಿತ್ತು. ಈ ಸಂದರ್ಭ ‘ಕೇಶವ ಪ್ರಶಸ್ತಿ’ಯನ್ನು ಬೆಂಗಳೂರು ವಿವಿಯ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ಕೃಷ್ಣ ಪರಮೇಶ್ವರ ಭಟ್ ಅವರಿಗೆ ಪ್ರದಾನ ಮಾಡಲಾಯಿತು.
ಪಾರಂಪರಿಕ ಭಾಷೆಯನ್ನು ಅಧ್ಯಯನ ಮಾಡುವ ರೀತಿಯು ಶಿಸ್ತುಬದ್ಧ ಜೀವನದ ಸಂಕೇತವಾಗಿದೆ. ಆಧುನಿಕ ಭಾಷಾ ತಜ್ಞರು ಇಂದು ಈ ಭಾಷೆಯ ಬಗ್ಗೆ ನಿರ್ಲಕ್ಷ ತೋರುತ್ತಿದ್ದಾರೆ. ಆಡು ಭಾಷೆಯಲ್ಲಿ ವ್ಯಾಕರಣ ಇರಬೇಕೆಂಬ ಅಪಾರ್ಥ ಮಾಡಿಕೊಂಡು ಸ್ವಚ್ಛಂಧತೆಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಡಾ.ಕೃಷ್ಣ ಭಟ್ ಅಭಿಪ್ರಾಯ ಪಟ್ಟರು.
ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಎಚ್.ಜಿ. ಶ್ರೀಧರ್ ಕನ್ನಡ ಗ್ರಂಥ ಸಂಪಾದನೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮುಂಬೈ ವಿವಿಯ ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ ಕುಮಾರ್ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕುಸುಮಾ ಕಾಮತ್ ವಹಿಸಿದ್ದರು. ಕನ್ನಡ ಉಪನ್ಯಾಸಕ ಡಾ.ಪುತ್ತಿ ವಸಂತ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶೀಲಾ ವಂದಿಸಿದರು. ಸುಪ್ರೀತಾ ಡಿ.ಎಸ್. ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಚಂದ್ರಶೇಖರ್ ಕೆದ್ಲಾಯ ಹಾಗೂ ಡಾ.ಪಾದೇಕಲ್ಲು ವಿಷ್ಣುಭಟ್ ಅವರಿಂದ ಮುದ್ದಣ- ಮನೋರಮೆ ಸಂವಾದ, ಗಮಕ ವಾಚನ ನಡೆಯಿತು.