×
Ad

ರಾಹುಲ್ ದ್ರಾವಿಡ್‌ರನ್ನು ಕೋಚ್ ಆಗಿ ನೇಮಿಸಲು ಬಿಸಿಸಿಐ ಒಲವು

Update: 2016-04-03 18:24 IST

ಮುಂಬೈ, ಎ.3: ಪ್ರಸ್ತುತ ಭಾರತ ಎ ಹಾಗೂ 19 ವರ್ಷದೊಳಗಿನವರ ತಂಡಕ್ಕೆ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್‌ರನ್ನು ಟೀಮ್ ಇಂಡಿಯಾದ ಕೋಚ್‌ರನ್ನಾಗಿ ನೇಮಿಸಲು ಬಿಸಿಸಿಐ ಒಲವು ತೋರಿದೆ. ನೂತನ ಕೋಚ್ ಆಯ್ಕೆಯ ಹೊಣೆ ಹೊತ್ತಿರುವ ಸಚಿನ್ ತೆಂಡುಲ್ಕರ್, ಸೌರವ್ ಗಂಗುಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರನ್ನೊಳಗೊಂಡ ಭಾರತೀಯ ಕ್ರಿಕೆಟ್ ಮಂಡಳಿಯ ಸಲಹಾ ಸಮಿತಿ ಬ್ಯಾಟಿಂಗ್ ದಂತಕತೆ ರಾಹುಲ್ ದ್ರಾವಿಡ್‌ರನ್ನು ಸಂಪರ್ಕಿಸಿ, ಸೀನಿಯರ್ ತಂಡದ ಕೋಚ್ ಆಗಲು ಆಸಕ್ತಿ ಇದೆಯೇ? ಎಂದು ವಿಚಾರಿಸಿದೆ. ಇದಕ್ಕೆ ಉತ್ತರವಾಗಿ ರಾಹುಲ್, ಈ ಕುರಿತು ಯೋಚಿಸಲು ಸ್ವಲ್ಪ ಸಮಯ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

 ಅತ್ಯಂತ ಮುಖ್ಯವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಯುವ ಪ್ರತಿಭಾವಂತ ದಾಂಡಿಗರಿಗೆ ಮಾರ್ಗದರ್ಶನ ನೀಡಲು ಸೂಕ್ತ ಕೋಚ್‌ಗಾಗಿ ಬಿಸಿಸಿಐ ಶೋಧ ನಡೆಸುತ್ತಿದೆ. ದ್ರಾವಿಡ್ ಕೋಚ್ ಹುದ್ದೆ ಸವಾಲನ್ನು ಸ್ವೀಕರಿಸಲು ಒಪ್ಪಿಕೊಂಡರೆ 2019ರ ವಿಶ್ವಕಪ್ ತನಕ ಕೋಚ್‌ರನ್ನಾಗಿ ನೇಮಕ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ರವಿ ಶಾಸ್ತ್ರಿ ಅವರ ಭಾರತದ ಟೀಮ್ ಡೈರೆಕ್ಟರ್ ಹುದ್ದೆಯ ಅವಧಿ ಈಗಾಗಲೇ ಕೊನೆಗೊಂಡಿದ್ದು, ಶಾಸ್ತ್ರಿ ಟೀಮ್ ಇಂಡಿಯಾದಲ್ಲಿ ಮುಂದುವರಿಯಲಿದ್ದಾರೆಯೇ ಎಂದು ಈ ತನಕ ಸ್ಪಷ್ಟವಾಗಿಲ್ಲ. ಉನ್ನತ ಮೂಲಗಳ ಪ್ರಕಾರ ಶಾಸ್ತ್ರಿ ಅವರನ್ನು ಪ್ರಮುಖ ಕೋಚ್ ಹುದ್ದೆಗೆ ಪರಿಗಣಿಸುವ ಸಾಧ್ಯತೆಯಿಲ್ಲ. ಬಿಸಿಸಿಐ ಸಲಹಾ ಸಮಿತಿ ಮಂಗಳವಾರ ಸಭೆ ನಡೆಸುವ ಮೂಲಕ ಮುಖ್ಯ ಕೋಚ್ ಆಯ್ಕೆಯ ಸಂಬಂಧ ಚರ್ಚೆ ನಡೆಸಲಿದೆ. ಕೋಚ್ ಹುದ್ದೆಗೆ ಪರಿಗಣಿಸಲ್ಪಟ್ಟಿರುವ ದ್ರಾವಿಡ್ ಪ್ರಸ್ತುತ ಐಪಿಎಲ್ ಫ್ರಾಂಚೈಸಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ. ಕಳೆದ ತಿಂಗಳು ನಡೆದ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ತಂಡ ಫೈನಲ್‌ಗೆ ತಲುಪಲು ಮಾರ್ಗದರ್ಶನ ನೀಡಿದ್ದರು. ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದಾಗ ಆ ತಂಡದ ಮೆಂಟರ್ ಆಗಿದ್ದರು. ದ್ರಾವಿಡ್ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಯುವ ಆಟಗಾರರೊಂದಿಗೆ ಉತ್ತಮವಾಗಿ ಬೆರೆಯುತ್ತಾರೆ ಎಂದು ಬಿಸಿಸಿಐ ಗಮನಿಸಿದೆ. ಭಾರತ ಜೂ.2016 ಹಾಗೂ ಮಾ.2017ರ ನಡುವೆ 18 ಟೆಸ್ಟ್ ಪಂದ್ಯಗಳನ್ನು ಆಡಲಿದೆ. 164 ಟೆಸ್ಟ್ ಹಾಗೂ 344 ಏಕದಿನ ಪಂದ್ಯಗಳನ್ನು ಆಡಿರುವ ದ್ರಾವಿಡ್‌ರನ್ನು ಬಿಸಿಸಿಐ ಬೆಂಬಲಿಸುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News