×
Ad

ಕಡಬ: ಸಾಂಸ್ಕೃತಿಕ ಹಿನ್ನಲೆಯಿಂದ ದೇಶ ಭದ್ರವಾಗಿದೆ-ಎಸ್.ಅಂಗಾರ

Update: 2016-04-03 18:45 IST

ಕಡಬ: ಸಾಂಸ್ಕೃತಿಕ ಹಿನ್ನಲೆಯಿಂದಾಗಿ ಭಾರತ ದೇಶ ಭದ್ರವಾಗಿದೆ ಇದಕ್ಕೆ ಹಿಂದಿನಿಂದಲೂ ಬಂದ ದೇಶದ ಸಾಂಸ್ಕೃತಿಕ ಪರಂಪರೆಯೇ ಕಾರಣವಾಗಿದೆ ಎಂದು ಸುಳ್ಯ ಶಾಸಕ ಎಸ್. ಅಂಗಾರ ಹೇಳಿದರು. ಅವರು ಏ.2ರಂದು ನಡೆದ ಕೊಂಬಾರು ಉ.ಹಿ.ಪ್ರಾ.ಶಾಲೆಯ ವಜ್ರಮಹೋತ್ಸವ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಅಧಿಕಾರ ಮತ್ತು ಸಂಪತ್ತಿನಿಂದ ನೆಮ್ಮದಿ ಸಿಗಲು ಸಾಧ್ಯವಿಲ್ಲ, ನಮ್ಮ ದೇಶದ ಮೇಲೆ ಆಕ್ರಮಣಗಳು ನಡೆದರೂ ದೇಶ ಎಂದಿಗೂ ಕುಂದಿಲ್ಲ, ಇದಕ್ಕೆ ನಮ್ಮ ಸಾಂಸ್ಕೃತಿಕ ಹಿನ್ನಲೆಯೇ ಕಾರಣವಾಗಿದೆ, ಆದುದರಿಂದ ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು, ಮಕ್ಕಳಿಗೆ ಮನೆಯಲ್ಲಿಯೇ ಸಂಸ್ಕಾರವನ್ನು ಕಲಿಸಬೇಕಾಗುತ್ತದೆ, ಯಾಕೆಂದರೆ ಶಾಲೆಯಲ್ಲಿ ಸಂಸೃತಿ ಸಂಸ್ಕಾರವನ್ನು ಬೋಧನೆ ಮಾಡುತ್ತಿಲ್ಲ ಎಂದ ಅವರು ಹಿರಿಯರು ಶ್ರಮ ಹಾಗೂ ತ್ಯಾಗದಿಂದ ನಿರ್ಮಿಸಿಕೊಟ್ಟ ವಿದ್ಯಾಕೇಂದ್ರಗಳನ್ನು ಅಭಿವೃದ್ದಿ ಪಡಿಸಿ ಅದರಲ್ಲಿ ನಮ್ಮ ವಿದ್ಯಾರ್ಥಿಗಳ ಭವಿಷ್ಯ ಅಡಗಿದೆ ಎಂದು ಹೇಳಿದರು.

 ವರ್ಲಿ ಚಿತ್ರ ಅನಾವರಣ ಮಾಡಿದ ಮಾಜಿ ಜಿ.ಪಂ. ಅಧ್ಯಕ್ಷೆ ಶ್ರೀಮತಿ ಆಶಾ ತಿಮ್ಮಪ್ಪ ಗೌಡ ಮಾತನಾಡಿ ಹಿಂದೆ ಶಿಕ್ಷಣದ ಸ್ಥಿತಿಗತಿ ಚೆನ್ನಾಗಿರಲಿಲ್ಲ ಆದರೂ ನಿಷ್ಠೆ ಹಾಗೂ ಶ್ರಮದಿಂದ ವಿದ್ಯಾಭ್ಯಾಸ ಮಾಡಲಾಗುತ್ತಿತ್ತು ಆದರೆ ಈಗ ಸರ್ವ ಶಿಕ್ಷಣ ಅಭಿಯಾನ ಯೋಜನೆಯ ಬಳಿಕ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯಾಗಿದೆ ಆದರೆ ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಈ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಬಡ ಹಾಗೂ ಮದ್ಯಮ ವರ್ಗದವರಿಗೆ ವಿದ್ಯಾಭ್ಯಾಸ ಮಾಡಲು ಕಷ್ಟವಾಗುತ್ತದೆ ಈ ಬಗ್ಗೆ ನಾವು ಎಚ್ಚರ ವಹಿಸಿ ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡಬೇಕಿದೆ ಎಂದರು. ಕಡಬ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ 60 ವರ್ಷಗಳ ಹಿಂದೆ ಸ್ಥಾಪಿತವಾದ ಶಾಲೆ ಇಂದು ವಜ್ರಮಹೋತ್ಸವ ಸಂಭ್ರಮದಲ್ಲಿದೆ ಮುಂದಿನ ದಿನಗಳಲ್ಲಿ ಶಾಲೆಗಳ ಅಭಿವೃದ್ದಿಗೆ ಜಿ.ಪಂ.ನಿಂದ ಅನುದಾನವನ್ನು ತರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದರು.

ಮಾಜಿ ತಾ.ಪಂ. ಅಧ್ಯಕ್ಷೆ ಶ್ರೀಮತಿ ಪುಲಸ್ಯ ರೈ ಮಾತನಾಡಿ ಸರಕಾರಿ ಶಾಲೆಯಲ್ಲಿ ಉತ್ತಮ ಭೋಧಕ ಶಿಕ್ಷಕರಿದ್ದಾರೆ, ಆದರೆ ನಾವು ಸರಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಲು ಹಿಂಜರಿಯುತ್ತಿದ್ದೆವೆ ಮುಂದಿನ ದಿನಗಳಲ್ಲಿ ಸರಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುವ ಮೂಲಕ ಶಾಲೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕು ಎಂದ ಅವರು ಮಕ್ಕಳಿಗೆ ಮೊಬೈಲ್ ಕೊಡುವುದು ಹೆಮ್ಮೆಯ ವಿಷಯವಲ್ಲ ಇದರಿಂದ ಅವರ ನಡತೆಯ ಮೇಲೆ ಪರಿಣಾಮ ಬೀರುತ್ತದೆ ಎಂದರು.

ರಂಗಮಂದಿರ ಉದ್ಘಾಟನೆ ಮಾಡಿದ ನಿವೃತ್ತ ಆಂಗ್ಲ ಭಾಷಾ ಉಪನ್ಯಾಸಕ ಎನ್. ಪದ್ಮನಾಭ ಗೌಡ ಶಾಲೆ ಬೆಳೆದು ಬಂದ ರೀತಿಯ ಬಗ್ಗೆ ತನ್ನ ಅನಿಸಿಕೆ ವ್ಯಕ್ತಪಡಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕೊಂಬಾರು ಗ್ರಾ.ಪಂ. ಅಧ್ಯಕ್ಷ ಅಜಿತ್, ತಾ.ಪಂ. ಸದಸ್ಯೆ ಆಶಾ ಲಕ್ಷ್ಮಣ್, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ವಜ್ರಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಕುಶಾಲಪ್ಪ ಗೌಡ ಕೈಕುರೆ, ಕಡಬ ಸಿ.ಎ. ಬ್ಯಾಂಕ್ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ರಾಜ್ಯ ಪ್ರಾ.ಶಾ.ಶಿ. ಸಂ.ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪ್ರಗತಿಪರ ಕೃಷಿಕ ಹರಿಯಪ್ಪ ಗೌಡ ಪುತ್ತಿಲ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಕಮರ್ಕಜೆ, ತಾಯಂದಿರ ಪರಿಷತ್ ಅಧ್ಯಕ್ಷೆ ಮೀನಾಕ್ಷಿ ಶೇಖರ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಶಿವಪ್ರಸಾದ್ ಕಾಯರ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಜ್ರಮಹೋತ್ಸವ ಸಮಿತಿಯ ಅಧ್ಯಕ್ಷ ನಾಗಪ್ಪ ಗೌಡ ಬೀಡುಮಜಲು ಪ್ರಾಸ್ತಾವಿಕವಾಗಿ ಮಾತನಾಡಿ ಬೇಡಿಕೆಗಳನ್ನು ಮುಂದಿಟ್ಟರು. ಮುಖ್ಯ ಶಿಕ್ಷಕ ಚಿದಾನಂದ ಗೌಡ.ಕೆ ಸ್ವಾಗತಿಸಿ ವರದಿ ಮಂಡಿಸಿದರು. ಗೋವಿಂದ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ರೇಗಪ್ಪ ಗೌಡ ಕಮರ್ಕಜೆ, ಆನಂದ ಗೌಡ ಪೊರ್ದೆಲು, ಸಂಜೀವ ಅಗರಿ, ಮಧುಚಂದ್ರ ಬೀಡು, ಧರ್ಮಪಾಲ ಕುಂಡಕೋರಿ, ಸೆಲ್ವಕುಮಾರ್, ಉಷಾಲತಾ, ಲಿಂಗಪ್ಪ ಪೊರ್ದೆಲು, ರಾಮಚಂದ್ರ ಮಂಡೆಕರ, ಪೂರ್ಣೇಶ್ ಬೀಡುಮಜಲು, ಪದ್ಮಯ್ಯ ಮರುವಂಜಿರವರುಗಳು ಅತಿಥಿಗಳಿಗೆ ಹೂ ಗುಚ್ಚ ನೀಡಿ ಗೌರವಿಸಿದರು.

ಸನ್ಮಾನ ಕಾರ್ಯಕ್ರಮ:

  ವಜ್ರಮಹೋತ್ಸವದ ಸಂದರ್ಭದಲ್ಲಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಶಿಕ್ಷಕರುಗಳಾದ ಪದ್ಮನಾಭ ಗೌಡ, ಸಾಂತಪ್ಪ ಗೌಡ ಪಿಜಕಳ, ಶ್ರೀಮತಿ ತೆರೆಸ ಮಸ್ಕರೇನಸ್, ಜತ್ತಪ್ಪ ಗೌಡ, ಕುಂಞಣ್ಣ ನಾಕ್,ವಿಮಲ, ಜಿನ್ನಪ್ಪ ಗೌಡ, ಕುಮಾರ್, ಕಮಲ, ಪೂರ್ಣಿಮ,ರಾಮಚಂದ್ರ ಗೌಡ, ಶ್ರೀಮತಿ ಜಾನಕಿ, ಸುರೇಶ್ ಗೌಡ, ಶ್ರೀಮತಿ ಸರಸ್ವತಿ, ಮಹಮ್ಮದ್ ಯುಸೂಫ್, ಶ್ರೀಮತಿ ಸರಸ್ವತಿ, ಕಮಲಾಕ್ಷಿ ಅಲ್ಲದೆ ಶಾಲೆಗೆ ರಂಗಮಂದಿರವನ್ನು ನಿರ್ಮಿಸಿಕೊಟ್ಟ ಕುಂಡಕೋರಿ ಮನೆತನದವರನ್ನು, ಶಾಲಾ ಪ್ರವೇಶದ್ವಾರವನ್ನು ನಿರ್ಮಿಸಿಕೊಟ್ಟ ಕೈಕುರೆ ಕುಶಾಲಪ್ಪ ಗೌಡ ದಂಪತಿ ಹಾಗೂ ಶಾಲ ನಾಮಫಲಕ ಕೊಡುಗೆ ನೀಡಿದ ಚಂದ್ರಶೇಖರ್ ಕೆ.ವಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮ:

ಸಂಜೆ ಅಂಗನವಾಡಿ ಹಾಗೂ ನಲಿ ಕಲಿ ಮಕ್ಕಳಿಂದ ನೃತ್ಯೋತ್ಸವ, ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ, ರಾತ್ರಿ ಹಿರಿಯ ವಿದ್ಯಾರ್ಥಿಗಳು ಮತ್ತು ಊರವರಿಂದ ತುಳು ಹಾಸ್ಯಮಯ ನಾಟಕ "ಬೆಚ್ಚನೆತ್ತೆರ್" ಪ್ರದರ್ಶನ ನಡೆಯಿತು.

ಉದ್ಘಾಟನಾ ಕಾರ್ಯಕ್ರಮ:

ಏ.2ರಂದು ಪೂರ್ವಾಹ್ನ ಕೊಂಬಾರು ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಜಯಶ್ರೀ ರಾಮಚಂದ್ರರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಬಂಟ್ರ ಸಿ.ಆರ್.ಪಿ. ಪೊಡಿಯರವರು ಧ್ವಜಾರೋಹಣ ನೆರವೇರಿಸಿದರು. ಶಾಲಾ ಪ್ರವೇಶದ್ವಾರವನ್ನು ಕೊಂಬಾರು ಶ್ರೀ ಉಳ್ಳಾಕ್ಲು ಬಚ್ಚನಾಯಕ, ಸಿದ್ದಪ್ಪ ದೇವರು ಇಲ್ಲಿಯ ಆಡಳಿತ ಮೊಕ್ತೇಸರ ಸುಬ್ರಾಯ ಗೌಡ ಉದ್ಘಾಟಿಸಿದರು. ವೇದಿಕೆಯಲ್ಲಿ ಕೊಂಬಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಚಿದಾನಂದ ಗೌಡ ಗುತ್ತುಮನೆ, ಬಿಳಿನೆಲೆ ತಾ.ಪಂ. ಮಾಜಿ ಸದಸ್ಯೆ ಸರೋಜಿನಿ ಜಯಪ್ರಕಾಶ್, ಕ್ಷೇತ್ರ ಸಮನ್ವಯಾಧಿಕಾರಿ ದಿನೇಶ್, ಬಿಳಿನೆಲೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಬಾಲಕೃಷ್ಣ ಗೌಡ ವಾಲ್ತಾಜೆ, ಕೊಂಬಾರು ಗ್ರಾ.ಪಂ. ಸದಸ್ಯರಾದ ಮಧುಸೂಧನ್, ರಮೇಶ್ ಮರುವಂಜಿ, ಕೊಂಬಾರು ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ರಾಘವೇಂದ್ರ ಮಾತನಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಜ್ರಮಹೋತ್ಸವದ ಪ್ರಯುಕ್ತ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ವೇದಿಕೆಯಲ್ಲಿ ವಜ್ರಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಕುಶಾಲಪ್ಪ ಗೌಡ ಕೈಕುರೆ, ಅಧ್ಯಕ್ಷ ನಾಗಪ್ಪ ಗೌಡ ಹೊಸಬೀಡು, ಎಸ್.ಡಿ.ಎಂ.ಸಿ. ಅಧ್ಯಕ್ಷ ಶಿವಪ್ರಸಾದ್ ಕಾಯರ್ತಡ್ಕ, ತಾಯಂದಿರ ಪರಿಷತ್ ಅಧ್ಯಕ್ಷ ಶ್ರೀಮತಿ ಮೀನಾಕ್ಷಿ ಶೇಖರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಕಮರ್ಕಜೆ ಉಪಸ್ಥಿತರಿದ್ದರು. ಮುಖ್ಯ ಗುರು ಚಿದಾನಂದ ಗೌಡ.ಕೆ ಸ್ವಾಗತಿಸಿ, ಸಹ ಶಿಕ್ಷಕ ಜಗದೀಶ್ ವಂದಿಸಿದರು. ಸಹ ಶಿಕ್ಷಕ ಅಬ್ರಹಾಂ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕ ಗೋವಿಂದ ನಾಯಕ್ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News