ಪಠ್ಯಪುಸ್ತಕದಿಂದ ಭಾರತದಲ್ಲಿ ಜಾತಿ ದೌರ್ಜನ್ಯಗಳ ಪ್ರಸ್ತಾಪ ಕೈಬಿಡಲು ಹಿಂದುತ್ವ ಸಂಘಟನೆಗಳ ಪ್ರಯತ್ನ ವಿಫಲ
ವಾಶಿಂಗ್ಟನ್,ಎ.3: ಭಾರತೀಯ ಇತಿಹಾಸದಲ್ಲಿ ಜಾತಿ ಆಧಾರಿತ ಹಿಂಸಾಚಾರದ ಕುರಿತ ಉಲ್ಲೇಖಗಳನ್ನು ಪಠ್ಯಪುಸ್ತಕಗಳಿಂದ ತೆಗೆದುಹಾಕಬೇಕೆಂಬ ಹಿಂದುತ್ವವಾದಿ ಸಂಘಟನೆಗಳ ಬೇಡಿಕೆಯನ್ನು ಕ್ಯಾಲಿಫೋರ್ನಿಯಾ ರಾಜ್ಯ ಶಿಕ್ಷಣ ಸಮಿತಿ (ಎಸ್‌ಬಿಇ) ಅವಿರೋಧವಾಗಿ ತಿರಸ್ಕರಿಸಿದೆ. ಅಮೆರಿಕದಲ್ಲಿ ಕಾರ್ಯಾಚರಿಸುತ್ತಿರುವ ಹಿಂದುತ್ವವಾದಿ ಸಂಘಟನೆಗಳಾದ ವೇದಿಕ್ ಫೌಂಡೇಶನ್ (ವಿಎಫ್) ಹಾಗೂ ಹಿಂದೂ ಅಮೆರಿಕನ್ ಫೌಂಡೇಶನ್ ( ಎಚ್‌ಎಎಫ್) ಹಾಗೂ ಒಬೆರಾಯ್ ಫೌಂಡೇಶನ್ , ಭಾರತೀಯ ಇತಿಹಾಸದ ಪಠ್ಯಪುಸ್ತಕಗಳಿಂದ ಜಾತಿ ಆಧಾರಿತ ಹಾಗೂ ದಲಿತ ವಿರೋಧಿ ಹಿಂಸಾಚಾರಗಳ ಪ್ರಸ್ತಾಪವನ್ನು , ಪಠ್ಯಪುಸ್ತಕ ಮರುಪರಿಷ್ಕರಣೆ ವೇಳೆ ಕೈಬಿಡಬೇಕೆಂದು ಕ್ಯಾಲಿಫೋರ್ನಿಯಾ ಶಿಕ್ಷಣ ಸಮಿತಿಗೆ ಮನವಿ ಸಲ್ಲಿಸಿದ್ದವು.
ಬಿಲ್ ಹಾಂಗ್ ನೇತೃತ್ವದ ಸಮಿತಿಯು ,ಹಿಂದೂ ಅಮೆರಿಕ ಪ್ರತಿಷ್ಠಾನ ಸೇರಿದಂತೆ ಹಿಂದುತ್ವವಾದಿ ಸಂಘಟನೆಗಳು ಸಲ್ಲಿಸಿದ ಎಲ್ಲಾ ಮನವಿಗಳನ್ನು ತಿರಸ್ಕರಿಸಿದೆ. ಭಾರತದಲ್ಲಿನ ವರ್ಣಭೇದ ವ್ಯವಸ್ಥೆ ಹಾಗೂ ಜಾತಿ ಹಿಂಸಾತಾರದ ಕುರಿತ ಉಲ್ಲೇಖಗಳನ್ನು ಪಠ್ಯಪುಸ್ತಕಗಳಿಂದ ಕೈಬಿಡಬೇಕೆಂಬು ಆಗ್ರಹಿಸಿ ಎಚ್‌ಎಎಫ್, ಆರೆಸ್ಸೆಸ್‌ನ ಬೆಂಬಲದೊಂದಿಗೆ ಅಮೆರಿಕದ ವಿವಿಧ ರಾಜ್ಯಗಳಲ್ಲಿ ಅಭಿಯಾನವನ್ನು ನಡೆಸುತ್ತಿದೆ.
ಹಿಂದೂ ಮೂಲಭೂತವಾದದ ಪುನರುತ್ಥಾನವಾದವನ್ನು ಪ್ರಚೋದಿಸುತ್ತಿರುವ ಶಕ್ತಿಗಳನ್ನು ಗುರುತಿಸುವುದು ಅತ್ಯಂತ ಮುಖ್ಯವಾಗಿದೆಯೆಂದು ಸ್ಟಾಕ್‌ಹೋಮ್ ಮೂಲದ ಸಿಖ್ಖ್ ಮಾಹಿತಿ ಕೇಂದ್ರದ ನಿರ್ದೇಶಕ ಭಜನ್ ಸಿಂಗ್ ಹೇಳುತ್ತಾರೆ,. ‘‘ ಹುಟ್ಟಿದ ಜಾತಿ ಆಧಾರದಲ್ಲಿ ಇತರರನ್ನು ಅಸ್ಪಶ್ಯರು ಹಾಗೂ ಕೆಳಮಟ್ಟದವರೆಂದು ಪರಿಗಣಿಸುವ ನಂಬಿಕೆಗಳನ್ನು ಭಾರತದಲ್ಲಿ ಹೇಗೆ ಬೆಳೆಸಲಾಗುತ್ತಿದೆಯೆಂಬ ಅನುಭವ ನಮಗಿದೆ’’ ಎಂದವರು ತಿಳಿಸುತ್ತಾರೆ. ಎಚ್‌ಎಎಫ್‌ನ ಕೋರಿಕೆಗಳನ್ನು ತಿರಸ್ಕರಿಸಿದ ಸಮಿತಿಯ ನಿರ್ಧಾರವು ತನಗೆ ಸಂತಸ ತಂದಿದೆಯೆಂದು ಅವರು ಹೇಳಿದ್ದಾರೆ. ಸಮಿತಿಯ ಅಂತಿಮ ಆಲಿಕೆಯಲ್ಲಿ ಭಾಗವಹಿಸಿದ ಹಲವಾರು ದಲಿತ ಸಂಘನೆಗಳು ಹಾಗೂ ದಕ್ಷಿಣ ಏಶ್ಯ ಬೋಧಕ ಸಮೂಹದ ಪ್ರಯತ್ನದಿಂದಾಗಿ ಹಿಂದೂಮೂಲಭೂತವಾದಿಗಳ ಪ್ರಯತ್ನ ವಿಫಲವಾಯಿತೆಂದು ಅವರು ಹೇಳಿದ್ದಾರೆ.
ಆಧುನಿಕ ಭಾರತ ದೇಶಕ್ಕೂ ಹಿಂದಿನ ಪುರಾತನ ಹಾಗೂ ಐತಿಹಾಸಿಕ ಪ್ರದೇಶಗಳನ್ನು ಕೂಡಾ ಭಾರತ ಪದವನ್ನು ಪಠ್ಯಪುಸ್ತಕಗಳಲ್ಲಿ ಬಳಸಬೇಕೆಂಬ ವಿಷಯದ ಬಗ್ಗೆಯೂ ವಿವಾದಗಳು ಉಂಟಾಗಿದ್ದವು. ಹಿಂದೂ ಸಂಘಟನೆಗಳು ಭಾರತ ಪದವನ್ನು ಬಳಸಬೇಕೆಂದು ಆಗ್ರಹಿಸಿದ್ದವು. ದಕ್ಷಿಣ ಏಶ್ಯ ಇತಿಹಾಸವನ್ನು ಬಹುತೇಕವಾಗಿ ಮೇಲ್ಜಾತಿಯ ಹಿಂದೂ ವಿದ್ವಾಂಸರೇ ಬರೆದಿದ್ದಾರೆ. ಅವರು ಭಾರತದ ದಲಿತ ಬಹುಜನರು, ಧಾರ್ಮಿಕ ಅಲ್ಪಸಂಖ್ಯಾತರಾದ ಕ್ರೈಸ್ತರು, ಬೌದ್ಧರು ಹಾಗೂ ಮುಸ್ಲಿಂ ಸಮೂಹಗಳನ್ನು ಉಲ್ಲೇಖಿಸದೆ ಕೈಬಿಟ್ಟಿದ್ದಾರೆಂದು ಕ್ಯಾಲಿಫೋರ್ನಿಯಾದ ಅಂಬೇಡ್ಕರ್ ಅಸೋಸಿಯೇಶನ್‌ನ ತೆನ್‌ಮೋಳಿ ಸೌಂದರ್‌ರಾಜನ್ ತಿಳಿಸಿದ್ದಾರೆ.
ಹಿಂದೂಜಾತಿ ವ್ಯವಸ್ಥೆ, ಅಸ್ಪಶ್ಯತೆ ಕುರಿತ ವಿಚಾರಗಳನ್ನು ಪಠ್ಯಪುಸ್ತಕಗಳನ್ನು ಪ್ರಕಟಿಸುವುದರಿಂದ ಹಿಂದೂಧರ್ಮದ ಬಗ್ಗೆ ಕೆಟ್ಟಭಾವನೆ ಮೂಡುವುದಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆಯೆಂದು ಹಿಂದೂ ಸಂಘಟನೆಗಳು ಅಭಿಪ್ರಾಯಿಸಿದ್ದವು. ಪಂಜಾಬ್‌ನ ಐದು ನದಿಗಳ ಜೊತೆ ಆರನೆ ನದಿಯನ್ನಾಗಿ ಪೌರಾಣಿಕ ಸರಸ್ವತಿ ನದಿಯನ್ನು ಗುರುತಿಸಬೇಕೆಂಬ ಹಿಂದೂ ಸಂಘಟನೆಗಳ ವಾದವನ್ನು ಕೂಡಾ ಸಮಿತಿ ತಿರಸ್ಕರಿಸಿದೆ.