×
Ad

ಡಿಸಿಬಿಯಿಂದ ಪಿನ್‌ರಹಿತ ಎಟಿಎಂ ಸೇವೆ

Update: 2016-04-03 23:17 IST

ಮುಂಬೈ,ಎ.3: ಎಟಿಎಂ ಮೂಲಕ ವ್ಯವಹಾರ ನಡೆಸಲು ಪಿನ್ ಸಂಖ್ಯೆ ಬಳಕೆ ಶೀಘ್ರವೇ ಹಳೆಯದಾಗಬಹುದು. ಇದೇ ಮೊದಲ ಬಾರಿಗೆ ಡಿಸಿಬಿ ಬ್ಯಾಂಕು ಆಧಾರ ಆಧಾರಿತ ಎಟಿಎಂ ಬಳಕೆ ಸೌಲಭ್ಯವನ್ನು ಪರಿಚಯಿಸಿದ್ದು, ಗ್ರಾಹಕರು ಪಿನ್ ಸಂಖ್ಯೆಯ ಬದಲು ತಮ್ಮ ಬಯೊಮೆಟ್ರಿಕ್ ವಿವರಗಳನ್ನು ಬಳಸಿ ವಹಿವಾಟು ನಡೆಸಬಹುದಾಗಿದೆ.

ಆಧಾರ ದತ್ತಾಂಶವನ್ನು ಬಳಸಿ ಕಾರ್ಯ ನಿರ್ವಹಿಸುವ ದೇಶದ ಮೊದಲ ಎಟಿಎಂ ಅನ್ನು ನಾವು ಸ್ಥಾಪಿಸಿದ್ದೇವೆ. ಬ್ಯಾಂಕು ಸದ್ಯ 400 ಎಟಿಎಮ್‌ಗಳನ್ನು ಹೊಂದಿದ್ದು, ಒಂದು ವರ್ಷದಲ್ಲಿ ಪೂರ್ಣ ನೆಟ್‌ವರ್ಕ್‌ನ್ನು ಹೊಸ ವ್ಯವಸ್ಥೆಗೊಳಪಡಿಸಲು ಉದ್ದೇಶಿಸಿದ್ದೇವೆ. ಆರಂಭಿಕ ಹಂತದಲ್ಲಿ ಬಳಕೆ ಡಿಸಿಬಿ ಗ್ರಾಹಕರಿಗೆ ಮಾತ್ರ ಸೀಮಿತವಾಗಿರಲಿದೆ ಎಂದು ಬ್ಯಾಂಕಿನ ಆಡಳಿತ ನಿರ್ದೇಶಕ ಮತ್ತು ಮುಖ್ಯ ನಿರ್ವಹಣಾಧಿಕಾರಿ ಮುರಳಿ ನಟರಾಜನ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ವಹಿವಾಟು ಆರಂಭಿಸಲು ಬಳಕೆದಾರರು ಎಟಿಎಮ್‌ನಲ್ಲಿ ತಮ್ಮ 12 ಅಂಕಿಗಳ ಆಧಾರ ಸಂಖ್ಯೆಯನ್ನು ನೀಡಬಹುದು ಅಥವಾ ತಮ್ಮ ಕಾರ್ಡ್‌ನ್ನು ಸ್ವೈಪ್ ಮಾಡಬಹುದು. ಆದರೆ ಗುರುತು ದೃಢೀಕರಣದ ಹಂತದಲ್ಲಿ ಪಿನ್ ಸಂಖ್ಯೆಗಿಂತ ಜೈವಿಕ ವಿವರ ಅಗತ್ಯವಾಗಿರುತ್ತದೆ. ಗ್ರಾಹಕ ಸ್ಕಾನರ್ ಮೇಲೆ ತನ್ನ ಬೆರಳನ್ನಿಟ್ಟರೆ ಸಾಕು, ಆತನಿಗೆ ವ್ಯವಹಾರದ ಬಾಗಿಲು ತೆರೆದುಕೊಳ್ಳುತ್ತದೆ ಎಂದು ಅವರು ವಿವರಿಸಿದರು.
ಗ್ರಾಹಕರು ಈ ಸೌಲಭ್ಯವನ್ನು ಬಳಸಿಕೊಳ್ಳುವ ಮುನ್ನ ತಮ್ಮ ಆಧಾರ ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ಮಾಡುವುದು ಅಗತ್ಯವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News