ಬಾಯ್‌ಫ್ರೆಂಡ್ ಆಸ್ಪತ್ರೆಗೆ ದಾಖಲು
ಮುಂಬೈ,ಎ.3: ಕಿರುತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಬಾಯ್‌ಫ್ರೆಂಡ್ ರಾಹುಲ ರಾಜ್ ಸಿಂಗ್ ಎರಡನೇ ದಿನವಾದ ರವಿವಾರ ಪೊಲೀಸರ ವಿಚಾರಣೆ ವೇಳೆ ಉಸಿರಾಟದ ಸಮಸ್ಯೆಯ ಬಗ್ಗೆ ದೂರಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ಸಾಕ್ಷಾಧಾರಗಳಿಗಾಗಿ ಪೊಲೀಸ್ ಅಧಿಕಾರಿಗಳು ಬ್ಯಾನರ್ಜಿಯ ಗೋರೆಗಾಂವ್ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಎದೆನೋವು ಮತ್ತು ಕಡಿಮೆ ರಕ್ತದೊತ್ತಡದಿಂದಾಗಿ ರಾಹುಲರನ್ನು ಕಾಂದಿವಲಿಯ ಶ್ರೀಸಾಯಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ ಎಂದು ಅವರ ಸಹಾಯಕನೋರ್ವ ತಿಳಿಸಿದ. ಪ್ರತ್ಯೂಷಾ ಎ.1ರಂದು ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕೃತ್ಯಕ್ಕೆ ನಿಖರ ಕಾರಣ ಇನ್ನೂ ಗೊತ್ತಾಗಿಲ್ಲವಾದರೂ ಪ್ರತ್ಯೂಷಾ ರಾಹುಲ್ ಜೊತೆಗಿನ ತನ್ನ ಸಂಬಂಧದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಎನ್ನಲಾಗಿದೆ.
ತನಿಖೆಯನ್ನು ಮುಂದುವರಿಸಿರುವ ಪೊಲೀಸರು ಈ ಹಿಂದೆ ಪ್ರತ್ಯೂಷಾ ಜೊತೆ ವಿವಾದಗಳನ್ನು ಹೊಂದಿದ್ದ ಅವರ ಸ್ನೇಹಿತರನ್ನೂ ಪ್ರಶ್ನಿಸಲು ನಿರ್ಧರಿಸಿದ್ದಾರೆ.