ಸಿಎಂ, ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ದೇಸಾಯಿ ಸಜ್ಜು
ಪುಣೆ,ಎ.3: ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಮಹಾರಾಷ್ಟ್ರ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ದಾಖಲಿಸಲು ತಾನು ಯೋಜಿಸುತ್ತಿರುವುದಾಗಿ ಭೂಮಾತಾ ರಣರಾಗಿಣಿ ಬ್ರಿಗೇಡ್‌ನ ಅಧ್ಯಕ್ಷೆ ತೃಪ್ತಿ ದೇಸಾಯಿ ಅವರು ರವಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ದೇವಸ್ಥಾನಗಳಲ್ಲಿ ಪ್ರವೇಶ ಮಹಿಳೆಯರ ಮೂಲ ಭೂತ ಹಕ್ಕು ಆಗಿದೆ ಮತ್ತು ಅದರ ರಕ್ಷಣೆ ಸರಕಾರಗಳ ಮೂಲಭೂತ ಕರ್ತವ್ಯವಾಗಿದೆ ಎಂದು ಬಾಂಬೆ ಉಚ್ಚ ನ್ಯಾಯಾಲಯವು ಶುಕ್ರವಾರ ತೀರ್ಪು ನೀಡಿತ್ತು. ಇದರ ಬೆನ್ನಿಗೇ ಶನಿವಾರ ಅಹ್ಮದ್ ನಗರ ಜಿಲ್ಲೆಯ ಶನಿಶಿಂಗಣಾಪುರ ದೇವಸ್ಥಾನಕ್ಕೆ ತೆರಳಿದ್ದ ದೇಸಾಯಿ ಮತ್ತು 25 ಕಾರ್ಯಕರ್ತೆಯರಿಗೆ ಗರ್ಭಗುಡಿಗೆ ಪ್ರವೇಶವನ್ನು ನಿರಾಕರಿಸಲಾಗಿತ್ತು.
ಮುಖ್ಯಮಂತ್ರಿ ಫಡ್ನವೀಸ್ ಅವರು ಜನವರಿಯಲ್ಲಿ ನಮ್ಮ ಹೋರಾಟ ವನ್ನು ಬೆಂಬಲಿಸಿದ್ದರು ಮತ್ತು ನಿನ್ನೆ ಅವರೇ ನಮ್ಮನ್ನು ರಕ್ಷಿಸುವಲ್ಲಿ ವಿಫಲರಾಗಿ ದ್ದಾರೆ. ಮಹಿಳಾ ಕಾರ್ಯಕರ್ತೆಯರನ್ನು ರಕ್ಷಿಸುವಲ್ಲಿ ವಿಫಲಗೊಂಡ ಪೊಲೀ ಸರು, ಸ್ಥಳೀಯಾಡಳಿತ ಮತ್ತು ದೇವಸ್ಥಾನದ ಟ್ರಸ್ಟಿಗಳ ವಿರುದ್ಧ ನಾವೀಗಾಗಲೇ ಸುಪಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ ಮತ್ತು ಮುಖ್ಯಮಂತ್ರಿ ಹಾಗೂ ಮಹಾರಾಷ್ಟ್ರ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸುವಂತೆ ಆಗ್ರಹಿಸಿದ್ದೇವೆ ಎಂದು ದೇಸಾಯಿ ತಿಳಿಸಿದರು.
ದೇವಸ್ಥಾನದಲ್ಲಿ ಶನಿವಾರ ಏನು ನಡೆದಿತ್ತೋ ಅದು ನಮ್ಮನ್ನು ಕೊಲ್ಲುವ ಪೂರ್ವಯೋಜಿತ ಸಂಚಾಗಿತ್ತು ಎಂದು ಆಪಾದಿಸಿದ ಅವರು, ಗ್ರಾಮಸ್ಥರು ನಮ್ಮ ಮೇಲೆ ದಾಳಿ ನಡೆಸಿದಾಗ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು ಎಂದರು.
ಶನಿವಾರದ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯವೇ ಮಹಾರಾಷ್ಟ್ರ ಸರಕಾರದ ವಿರುದ್ಧ ಸ್ವಯಂಪ್ರೇರಿತ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ. ಈ ನಿರೀಕ್ಷೆ ಹುಸಿಯಾದರೆ ನಾವೇ ಮೊಕದ್ದಮೆಯನ್ನು ದಾಖಲಿಸುತ್ತೇವೆ ಎಂದರು.
ದೇವಸ್ಥಾನದ ಗರ್ಭಗುಡಿಯೊಳಗೆ ಬಲವಂತದಿಂದ ಪ್ರವೇಶಿಸಲು ದೇಸಾಯಿಯವರ ಪ್ರತಿಭಟನೆಯು ಪ್ರಚಾರಕ್ಕಾಗಿ ನಡೆಸುತ್ತಿರುವ ರಾಜಕೀಯ ತಂತ್ರವಾಗಿದೆ ಎಂಬ ಬಿಜೆಪಿಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದೊಂದು ಬೇಜವಾಬ್ದಾರಿ ಹೇಳಿಕೆ ಎಂದು ಟೀಕಿಸಿದರು.