ಭಾರತದ ಪ್ರತಿ 66 ಮಕ್ಕಳಲ್ಲಿ 1 ಮಗುವಿಗೆ ಆಟಿಸಂ
ಉಡುಪಿ, ಎ.3: ಸಣ್ಣ ಪ್ರಾಯದ ಮಕ್ಕಳ ನರ ವಿಕಾಸ ತೊಂದರೆಯಿಂದ ಕಾಣಿಸಿಕೊಳ್ಳುವ ಆಟಿಸಂ(ಸ್ವಮಗ್ನತೆ) ಇಂದು ಭಾರತದಲ್ಲಿ ಪ್ರತಿ 66 ಮಕ್ಕಳ ಪೈಕಿ ಒಂದು ಮಗುವಿನಲ್ಲಿ ಕಂಡು ಬರುತ್ತಿದೆ ಎಂದು ಉಡುಪಿಯ ಮನೋ ವೈದ್ಯ ಡಾ.ವಿರೂಪಾಕ್ಷ ದೇವರಮನೆ ತಿಳಿಸಿದ್ದಾರೆ.
ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ವತಿಯಿಂದ ಶನಿವಾರ ಆಸ್ಪತ್ರೆಯ ಕಮಲಾ ಬಾಳಿಗ ಸಭಾಂಗಣದಲ್ಲಿ ಆಯೋಜಿಸಲಾದ ಆಟಿಸಂ ಕುರಿತ ಕಾರ್ಯಾಗಾರವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಬದಲಾದ ಜೀವನ ಶೈಲಿ ಹಾಗೂ ಪ್ರಾಕೃತಿಕವಾಗಿ ಅಂತರ ಕಾಯ್ದುಕೊಂಡು ಜೀವಿಸುವುದರಿಂದ ಆಟಿಸಂ ಹೆಚ್ಚಾಗುತ್ತದೆ. ಕೆಲವು ವರ್ಷಗಳ ಹಿಂದೆ 10 ಸಾವಿರ ಜನರಲ್ಲಿ 10 ಜನರಿಗೆ ಆಟಿಸಂ ಕಂಡು ಬರುತ್ತಿದ್ದರೆ, ಇಂದು 200 ಜನರಲ್ಲಿ ಅದು ಕಂಡುಬರುತ್ತಿದೆ. ಸಮೀಕ್ಷೆಯ ಪ್ರಕಾರ ಜಗತ್ತಿನಲ್ಲಿ 10ಮಿಲಿಯನ್ ಮಕ್ಕಳು ಆಟಿಸಂನಿಂದ ಬಳಲುತ್ತಿದ್ದಾರೆ ಎಂದು ಅವರು ಹೇಳಿದರು.
ಆಧುನಿಕತೆಯಿಂದಾಗಿ ಇಂದು ನಾವು ಪ್ರಕೃತಿಯಿಂದ ದೂರವಾಗುತ್ತಿದ್ದು, ಆರೋಗ್ಯಕ್ಕೆ ಹಾನಿಕಾರಕವಾಗಿರುವ ಕೃತಕ ಆಹಾರವನ್ನು ಅವಲಂಬಿಸಿಕೊಂಡಿದ್ದೇವೆ. ಇದರ ಪರಿಣಾಮ ಗರ್ಭಿಣಿಯರು ಸರಿ ಯಾದ ಪೋಷಣೆ ಸಿಗದೆ ತೊಂದರೆಗೆ ಒಳಗಾಗುತ್ತಾರೆ. ಇದರಿಂದ ಮಗುವಿನ ನರ ವಿಕಾಸದಲ್ಲಿ ತೊಂದರೆ ಉಂಟಾಗಿ ಆಟಿಸಂ ಕಾಣಿಸಿಕೊಳ್ಳುತ್ತಿದೆ. ಇಂದು ನಾವು ಪ್ರಕೃತಿದತ್ತವಾದ ಜೀವನ ಶೈಲಿಯತ್ತ ಮುಖ ಮಾಡುವುದರಿಂದ ಆಟಿಸಂ ಅನ್ನು ಕಡಿಮೆ ಮಾಡಬಹುದಾಗಿದೆ ಎಂದರು.
ಆಟಿಸಂ 6 ತಿಂಗಳ ಮಗುವಿನಿಂದ 3 ವರ್ಷ ಪ್ರಾಯ ಮಗುವಿನಲ್ಲಿ ಕಂಡು ಬರುತ್ತದೆ. ಆದರೆ ಇದು 5 ವರ್ಷದ ನಂತರ ಶಾಲೆಗೆ ತೆರಳುವ ವೇಳೆಗೆ ತಿಳಿಯುತ್ತದೆ. ಇದನ್ನು ಹೊಂದಿರುವ ಮಕ್ಕಳು ಸೀಮಿತ ಚಟುವಟಿಕೆಯನ್ನು ಹೊಂದಿ, ತಮ್ಮದೇ ಜಗತ್ತಿನಲ್ಲಿ ವ್ಯವಹರಿಸುತ್ತಾರೆ. ಕಾರಣವಿಲ್ಲದೆ ನಗುವುದು, ಕೈ ಬಡಿಯುವುದು ಮತ್ತು ವಯೋಮಾನಕ್ಕೆ ತಕ್ಕಂತೆ ಭಾಷೆಯ ಬೆಳವಣಿಗೆ ಇರುವುದಿಲ್ಲ. ಕೆಲವರು ಆಟಿಸಂನ್ನು ತಪ್ಪಾಗಿ ಗುರುತಿಸಿ ಬುದ್ಧಿಮಾಂದ್ಯತೆ ಎಂದು ಪರಿಗಣಿಸುತ್ತಾರೆ ಎಂದು ಅವರು ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಣಿ ಪಾಲ ಕೆಎಂಸಿಯ ಸಹಾಯಕ ಪ್ರಾಧ್ಯಾಪಕಿ ಡಾ.ಅಂಜು ಶುಕ್ಲಾ ಮಾತನಾಡಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯ ಕೀಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ, ಮನೋವೈದ್ಯೆ ಡಾ.ನಮೃತಾ ಉಪಸ್ಥಿತ ರಿದ್ದರು. ಆಡಳಿತಾಧಿಕಾರಿ ಸೌಜನ್ಯಾ ಶೆಟ್ಟಿ ಸ್ವಾಗತಿಸಿದರು. ಡಾ. ಧಾತ್ರಿದತ್ತ ವಂದಿಸಿದರು. ಪದ್ಮಾ ಹಾಗೂ ಪ್ರಭಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.