ಆರ್‌ಟಿಐ ಕಾರ್ಯಕರ್ತನ ಹತ್ಯೆ ಪ್ರಕರಣ: ನರೇಶ್ ಶೆಣೈ ಪತ್ತೆಗೆ ಗೋವಾ, ಅಂಡಮಾನ್‌ಗೆ ತೆರಳಿದ ಪೊಲೀಸ್ ತಂಡ?

Update: 2016-04-03 18:13 GMT

ಮಂಗಳೂರು, ಎ.3: ಆರ್‌ಟಿಐ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾ ಹತ್ಯೆಯ ಬಳಿಕ ತಲೆಮರೆಸಿಕೊಂಡಿರುವ ಆರೋಪಿ ಯುವ ಬ್ರಿಗೇಡ್ ಸಂಸ್ಥಾಪಕ ನರೇಶ್ ಶೆಣೈ ಪತ್ತೆಗಾಗಿ ಪೊಲೀಸ್ ತಂಡ ಗೋವಾ ಮತ್ತು ಅಂಡಮಾನ್‌ಗಳಿಗೆ ತೆರಳಿದೆ ಎಂದು ತಿಳಿದುಬಂದಿದೆ.

ಪೊಲೀಸರ ಎರಡು ಪ್ರತ್ಯೇಕ ತಂಡಗಳು ಗೋವಾ ಮತ್ತು ಅಂಡಮಾನ್‌ಗಳಿಗೆ ತೆರಳಿದ್ದು, ನರೇಶ್ ಶೆಣೈ ಸೇರಿದಂತೆ ನಾಲ್ವರು ಶಂಕಿತ ಆರೋಪಿಗಳಿಗಾಗಿ ಶೋಧ ನಡೆಸುತ್ತಿವೆ ಎಂದು ಹೇಳಲಾಗಿದೆ.

ವಿನಾಯಕ ಪಾಂಡುರಂಗ ಬಾಳಿಗಾ ಮಾ.21ರಂದು ಹತ್ಯೆಗೀಡಾಗಿದ್ದರು. ಪೊಲೀಸರು ಮಾ.27ರಂದು ವಿನೀತ್ ಪೂಜಾರಿ ಮತ್ತು ವಿಶಿತ್ ದೇವಾಡಿಗ ಎಂಬಿಬ್ಬರನ್ನು ಬಂಧಿಸಿದ್ದರು. ಆರೋಪಿಗಳು ಪಂಜಿಮೊಗರು ಗ್ರಾಮದ ಉರುಂಡಾಡಿಗುಡ್ಡೆಯ ಶಿವ(21) ಎಂಬಾತ ಬಾಳಿಗಾ ಹತ್ಯೆಗಾಗಿ ನಮಗೆ ಸುಪಾರಿ ನೀಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ. ಕಾವೂರು ಶಾಂತಿನಗರ ಮೈದಾನದ ಬಳಿಯ ಶ್ರೀಕಾಂತ್(40) ಎಂಬಾತ ಶಿವ ಎಂಬಾತನ ಮೂಲಕ ಕೊಲೆಗೆ ಗುತ್ತಿಗೆ ನೀಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಯುವ ಬ್ರಿಗೇಡ್‌ನ ಸಂಸ್ಥಾಪಕ ನರೇಶ್ ಶೆಣೈ ನಡೆಸುತ್ತಿದ್ದ ಹಾಸ್ಟೆಲ್‌ಗಳ ನಿರ್ವಹಣೆ ಕೆಲಸವನ್ನು ಶ್ರೀಕಾಂತ್ ಮಾಡುತ್ತಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ಬಾಳಿಗಾರನ್ನು ಹತ್ಯೆ ಮಾಡಿದ ಆರೋಪಿಗಳು ನರೇಶ್ ಶೆಣೈ ಆಪ್ತರಿಗೆ ಸೇರಿದ ಕ್ವಾಲಿಸ್ ವಾಹನವೊಂದರಲ್ಲಿ ಪರಾರಿಯಾಗಿದ್ದರು ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ. ಇದೀಗ ಬಾಳಿಗಾರ ಹತ್ಯೆ ಬಳಿಕ ನರೇಶ್ ಶೆಣೈ, ಶ್ರೀಕಾಂತ್ ಹಾಗೂ ಶಿವ ಎಂಬವರು ನಾಪತ್ತೆಯಾಗಿದ್ದು, ಇವರ ಪತ್ತೆಗಾಗಿ ಶೋಧ ಮುಂದುವರಿದಿದೆ.

ವಿನೀತ್ ಪೂಜಾರಿ ಮತ್ತು ವಿಶಿತ್ ದೇವಾಡಿಗ ವಿಚಾರಣೆಯ ಸಂದರ್ಭದಲ್ಲಿ ನೀಡಿರುವ ಮಾಹಿತಿಯಂತೆ ಹತ್ಯೆಯಲ್ಲಿ ನರೇಶ್ ಶೆಣೈ ಕೈವಾಡ ಇರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಅದರಂತೆ ನರೇಶ್ ಶೆಣೈಗೆ ನೋಟಿಸ್ ನೀಡಿದ್ದ ಎಸಿಪಿ ತಿಲಕ್‌ಚಂದ್ರ ನೇತೃತ್ವದ ತನಿಖಾ ತಂಡ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ ನರೇಶ್ ಶೆಣೈ ತನಿಖಾ ತಂಡದ ಎದುರು ಹಾಜರಾಗಲಿಲ್ಲ. ಮಾ.31ರಂದು ನಗರದ ವಿ.ಟಿ. ರಸ್ತೆಯಲ್ಲಿರುವ ಶೆಣೈ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಶೆಣೈ ಹರಿದ್ವಾರಕ್ಕೆ ತೆರಳಿರುವುದಾಗಿ ಕುಟುಂಬದ ಸದಸ್ಯರು ತಿಳಿಸಿದ್ದರು. ಅಲ್ಲಿಂದ ಶೆಣೈ ಗೋವಾ ಅಥವಾ ಅಂಡಮಾನ್‌ಗೆ ಹೋಗಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಪೊಲೀಸ್ ಅಧಿಕಾರಿಗಳ ಎರಡು ಪ್ರತ್ಯೇಕ ತಂಡಗಳಾಗಿ ತೆರಳಿದ್ದು, ನರೇಶ್ ಶೆಣೈ ಸೇರಿದಂತೆ ನಾಲ್ವರು ಶಂಕಿತ ಆರೋಪಿಗಳಿಗಾಗಿ ಶೋಧ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News