ಕಬ್ಬಿನಾಲೆ ಅರಣ್ಯದೊಳಗೆ ವಿದ್ಯಾರ್ಥಿಗಳ ಪ್ರವಾಸ
ಹೆಬ್ರಿ, ಎ.3: ಕಸ್ತೂರಿರಂಗನ್ ವರದಿ, ಹುಲಿ ಯೋಜನೆ ಜಾರಿಯ ಭಯದಲ್ಲಿ ದಿನದೂಡುತ್ತಿರುವ ನಕ್ಸಲ್ ಬಾಧಿತ ಪ್ರದೇಶವಾಗಿರುವ ಪಶ್ಚಿಮ ಘಟ್ಟದ ಸೆರಗಿನ ಹಳ್ಳಿಗಳ ನೈಜ ಚಿತ್ರಣವನ್ನು ತಿಳಿಯಲು ಹಾಗೂ ಗ್ರಾಮೀಣ ಬದು ಕನ್ನು ಅರಿಯಲು ಉಡುಪಿಯ ಎಂಜಿಎಂ ಕಾಲೇಜಿನ ಪತ್ರಿಕೋ ದ್ಯಮ ವಿಭಾಗ ಮತ್ತು ಫೋಟೋಗ್ರಫಿ ಕ್ಲಬ್ ವಿದ್ಯಾರ್ಥಿಗಳಿಗೆ ಹೆಬ್ರಿ ಸಮೀಪದ ಕಬ್ಬಿನಾಲೆ ದುರ್ಗಕ್ಕೆ ಚಾರಣವನ್ನು ಏರ್ಪಡಿಸಲಾಗಿತ್ತು.
ಈ ಚಾರಣದಲ್ಲಿ ಕಾಲೇಜಿನ 80 ವಿದ್ಯಾರ್ಥಿಗಳೊಂದಿಗೆ 15ಕ್ಕೂ ಅಧಿಕ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು. ಮಲೆಕುಡಿಯರಾದ ದಯೇಂದ್ರ ಗೌಡ ತನ್ನ ಸಮುದಾಯಕ್ಕೂ ಕಾಡಿಗೂ ಇರುವ ನಂಟನ್ನು ಮತ್ತು ನಾಡು ಆಧುನೀಕರಣಗೊಳ್ಳುತ್ತಿದ್ದಂತೆ ಪರಿಸರವನ್ನೇ ನಂಬಿಕೊಂಡು ಬದುಕುತ್ತಿರುವ ಕುಟುಂಬಗಳು ದಿಕ್ಕುಗೆಡುತ್ತಿರುವ ಬಗ್ಗೆ ವಿವರಿಸಿದರು. 40 ವರ್ಷಗಳಿಂದ ಚಾರಣಗೈಯುತ್ತಿರುವ ಯೂತ್ ಹಾಸ್ಟೆಲ್ ಉಡುಪಿ ಘಟಕದ ಮಾಜಿ ಅಧ್ಯಕ್ಷ ರಾಘವೇಂದ್ರ ನಾಯಕ್ ಚಾರಣದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಪಕ್ಷಿತಜ್ಞ, ಪತ್ರಕರ್ತ ಉಮೇಶ್ ಕುಕ್ಕುಪಲ್ಕೆ ಪಕ್ಷಿವೀಕ್ಷಣೆಯ ಕುರಿತು ಮಾಹಿತಿ ನೀಡಿದರು. ಸುದ್ದಿವಾಹಿನಿಯ ವರದಿಗಾರ ರಾದ ಶಶಿಧರ ಮಾಸ್ತಿಬೈಲು, ನಾಗ ರಾಜ್‌ರಾವ್, ಅಶೋಕ್, ಹರೀಶ್ ಪಾಲೆಚ್ಚಾರ್, ಸುಭಾಶ್ಚಂದ್ರ ವಾಗ್ಳೆ, ನೆಲ್ಲಿಜೆ ನವ್ಯಜ್ಯೋತಿ ಸಾಕ್ಷ್ಯಚಿತ್ರ ನಿರ್ಮಾಣ, ಗ್ರಾಮೀಣ ವರದಿಗಾರಿಕೆ ಕುರಿತು ಮಾಹಿತಿ ನೀಡಿದರು. ಛಾಯಾಗ್ರಾಹಕರಾದ ಅಶ್ವತ್ ರಾವ್, ಶಿಜಿತ್ ಕುಮಾರ್, ಅಕ್ಷಯ್ ಕುಮಾರ್, ಗುರುರಾಜ್ ವಿದ್ಯಾರ್ಥಿಗಳಿಗೆ ಫೋಟೋಗ್ರಫಿ ಬಗ್ಗೆ ವಿವರಿಸಿದರು. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮಂಜುನಾಥ್ ಕಾಮತ್, ಕನ್ನಡ ವಿಭಾಗ ಮುಖ್ಯಸ್ಥ ಡಾ.ಪುತ್ತಿ ವಸಂತ ಕುಮಾರ್, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಅರುಣ್ ಕುಮಾರ್, ಉಪನ್ಯಾಸಕ ವಿದ್ಯಾನಾಥ್ ಕೆ., ಪದ್ಮನಾಭ್ ನಾಯಕ್, ಡಾ.ಬಾಬು, ಸಂತೋಷ್ ಶೆಟ್ಟಿ, ಪ್ರಿಯಾಂಕಾ ಶೆಟ್ಟಿ, ಅದಿತಿ, ಅವಿನಾಶ್, ದೈಹಿಕ ಶಿಕ್ಷಣ ನಿರ್ದೇಶಕ ಸತೀಶ್ ಹೆಗ್ಡೆ, ಮುಖ್ಯ ಗ್ರಂಥಪಾಲಕ ಕಿಶೋರ್ ಚಂದನ್ ಉಪಸ್ಥಿತರಿದ್ದರು.