×
Ad

ಸೌದಿ ದೊರೆಗೆ ಕೇರಳದ ಮಸೀದಿಯ ಪ್ರತಿಕೃತಿ ನೀಡಿದ ಮೋದಿ

Update: 2016-04-03 23:51 IST

ರಿಯಾದ್, ಎ.3: ಸೌದಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ರವಿವಾರ ಸೌದಿ ದೊರೆ ಸಲ್ಮಾನ್ ಬಿನ್ ರಶೀದ್‌ರನ್ನು ಭೇಟಿಯಾದ ಸಂದರ್ಭದಲ್ಲಿ ಅವರಿಗೆ ಕ್ರಿ.ಶ. 629ರಲ್ಲಿ ಭಾರತದಲ್ಲಿ ನಿರ್ಮಿಸಲ್ಪಟ್ಟ ಪ್ರಪ್ರಥಮ ಮಸೀದಿಯೆಂದು ನಂಬಲಾದ ಚೇರಮಾನ್ ಜುಮಾ ಮಸೀದಿಯ ಚಿನ್ನದ ಲೇಪನದ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದರು.

ಕೇರಳದ ತ್ರಿಶೂರ್ ಜಿಲ್ಲೆಯಲ್ಲಿರುವ ಈ ಮಸೀದಿಯನ್ನು ಕ್ರಿಸ್ತಶಕ 629ರಲ್ಲಿ ಅರಬ್ ವರ್ತಕರು ನಿರ್ಮಿಸಿದ್ದರೆನ್ನಲಾಗಿದೆ. ‘‘ಚೇರಮಾನ್ ಜುಮಾ ಮಸೀದಿಯು, ಭಾರತ ಹಾಗೂ ಸೌದಿ ನಡುವೆ ಪುರಾತನ ಕಾಲದಿಂದಲೂ ಸಕ್ರಿಯ ವ್ಯಾಪಾರ ಬಾಂಧವ್ಯಗಳಿದ್ದವು ಎಂಬುದರ ಸಂಕೇತವಾಗಿದೆ’’ ಎಂದು ಪ್ರಧಾನಿ ಕಾರ್ಯಾಲಯವು ಟ್ವೀಟ್ ಮಾಡಿದೆ. ಜಾನಪದ ನಂಬಿಕೆಗಳ ಪ್ರಕಾರ, ಪ್ರವಾದಿ ಮುಹಮ್ಮದರ ಕಾಲದಲ್ಲಿ ಕೇರಳವನ್ನು ಆಳುತ್ತಿದ್ದ ಚೇರ ವಂಶದ ದೊರೆ ಚೇರಮಾನ್ ಪೆರುಮಾಳ್ ಅರೇಬಿಯಕ್ಕೆ ತೆರಳಿದ್ದ.ಅಲ್ಲಿ ಪ್ರವಾದಿಯವರನ್ನು ಭೇಟಿಯಾದ ಬಳಿಕ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರೆಂದು ಪ್ರಧಾನಿ ಕಾರ್ಯಾಲಯದ ಹೇಳಿಕೆ ತಿಳಿಸಿದೆ.

ಒಮನ್‌ನಲ್ಲಿ ಅನಾರೋಗ್ಯದಿಂದ ಸಾವನ್ನಪ್ಪುವ ಮೊದಲು ತನ್ನ ಆಧೀನದ ರಾಜರಿಗೆ ಪತ್ರಗಳನ್ನು ಬರೆದು ತನ್ನ ಇಡೀ ರಾಜ್ಯವನ್ನು ಅವರಿಗೆ ಹಸ್ತಾಂತರಿಸಿದ್ದರು ಹಾಗೂ ಭಾರತಕ್ಕೆ ಭೇಟಿ ನೀಡಲು ಬಯಸುತ್ತಿರುವ ಅರಬ್‌ವರ್ತಕರಿಗೆ ಎಲ್ಲಾ ರೀತಿಯ ನೆರವನ್ನು ನೀಡುವಂತೆ ಅವರನ್ನು ಕೋರಿದ್ದರು.

ಈ ಮಸೀದಿಯಲ್ಲಿ ಸಾವಿರವರ್ಷಗಳಷ್ಟು ಹಳೆಯದೆಂದು ನಂಬಲಾದ ಪುರಾತನವಾದ ದೀಪವೊಂದಿದ್ದು, ಅಲ್ಲಿ ಸದಾ ದೀಪ ಉರಿಯುತ್ತಿರುತ್ತದೆ. ಎಲ್ಲಾ ಧರ್ಮಗಳ ಜನರು ಈ ದೀಪಕ್ಕೆ ಎಣ್ಣೆಯನ್ನು ಕಾಣಿಕೆಯಾಗಿ ನೀಡುತ್ತಾರೆ. ಉತ್ತರಭಾರತದಲ್ಲಿ ಮೊಗಲರ ಆಗಮನಕ್ಕೆ ಮುನ್ನವೇ ಭಾರತದಲ್ಲಿ ಇಸ್ಲಾಂ ಅಸ್ತಿತ್ವದಲ್ಲಿತ್ತೆಂಬುದಕ್ಕೆ ಈ ಮಸೀದಿಯು ಸಾಕ್ಷಿಯಾಗಿದೆಯೆಂದು ಹಲವರು ನಂಬುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News