ಡಾ.ಬಾಬು ಜಗಜೀವನರಾಂ 109ನೇ ಜನ್ಮ ದಿನಾಚರಣೆ ದಲಿತರ ಮೇಲಿನ ದೌರ್ಜನ್ಯ, ದಬ್ಬಾಳಿಕೆ ಚಾರಿತ್ರಿಕ ಪ್ರಮಾದ-ಡಾ.ರಾಜೇಂದ್ರ
ಪುತ್ತೂರು: ದಲಿತ ಸಮಾಜದ ಮೇಲೆ ನಡೆದ ದೌರ್ಜನ್ಯ, ದಬ್ಬಾಳಿಕೆ ಎಂಬುದು ಒಂದು ಚಾರಿತ್ರಿಕ ಪ್ರಮಾದ. ಈ ತಪ್ಪನ್ನು ತಿದ್ದಿಕೊಳ್ಳುವ ಅವಕಾಶ ಇಂದಿನ ಸಮಾಜಕ್ಕಿದೆ. ಧ್ವನಿರಹಿತರಿಗೆ ಸರ್ಕಾರದ ಯೋಜನೆಗಳು ಸಿಗುವಂತಾಗಬೇಕು .ಹಾಗಾಗಿ ಎಲ್ಲ ರೀತಿಯ ಸವಲತ್ತುಗಳು ಆ ಸಮಾಜಕ್ಕೆ ಸಿಗುವ ನಿಟ್ಟಿನಲ್ಲಿ ಸರ್ವರೂ ಕೈ ಜೋಡಿಸಬೇಕು ಎಂದು ಪುತ್ತೂರು ಉಪವಿಭಾಗಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದರು. ಪುತ್ತೂರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಅವರ 109ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಷ್ಟಗಳು, ಸವಾಲುಗಳು ಎದುರಾಗುತ್ತವೆ ಎಂಬ ಕಾರಣಕ್ಕೆ ನಾವು ಎದೆಗುಂದಬಾರದು. ಕಷ್ಟಗಳು ,ಸವಾಲುಗಳು ನಮ್ಮೊಳಗಿನ ನಾಯಕನನ್ನು ಬಡಿದೆಬ್ಬಿಸುತ್ತವೆ ಇದಕ್ಕೆ ಡಾ. ಬಾಬು ಜಗಜೀವನ್‌ರಾಂ ಅವರು ಉತ್ತಮ ಉದಾಹರಣೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ನಾಯಕನಾಗಿ ಬೆಳೆದವನಲ್ಲಿ ತಾನೊಬ್ಬನೇ ಬೆಳೆದರೆ ಸಾಕು ಎಂಬ ಭಾವನೆ ಇರಕೂಡದು. ನಾಯಕತ್ವದ ಸರಣಿಯನ್ನು ಬೆಳೆಸುವ ಗುಣ ಇರಬೇಕು.
ದೇಶದ ಮಾಜಿ ಪ್ರಧಾನಿ ಡಾ. ಬಾಬು ಜಗಜೀವನ ರಾಂ ಅವರ ಮಾದರಿ ನಮಗೆಲ್ಲ ಆದರ್ಶವಾಗಬೇಕು ಎಂದರು. ದಮನಕ್ಕೆ ತುತ್ತಾದ ಸಮುದಾಯದಿಂದ ನಾಯಕರಾಗಿ ಬೆಳೆದು ಬಂದವರು ತಮ್ಮ ಸಮಾಜದಲ್ಲಿ ಇನ್ನಷ್ಟು ನಾಯಕರನ್ನು ಬೆಳೆಸಬೇಕು. ಇದರಿಂದ ಆ ಸಮಾಜದ ಅಭ್ಯುದಯದ ಪಥ ಮುಂದುವರಿಯುತ್ತದೆ ಎಂದ ಅವರು ದಲಿತರು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಬಿಡುಗಡೆಯಾಗುವ ಅನುದಾನವನ್ನು ಸಮರ್ಪಕವಾಗಿ ಬಳಸುವತ್ತ ಅಧಿಕಾರಿಗಳು ಆದ್ಯತೆ ನೀಡಬೇಕೆಂದು ಕರೆಯಿತ್ತರು. ಪುತ್ತೂರಿನ ವಿವೇಕಾನಂದ ಬಿ.ಎಡ್. ಕಾಲೇಜಿನ ಉಪನ್ಯಾಸಕಿ ಡಾ.ಶೋಭಿತಾ ಸತೀಶ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ವಿಶೇಷ ಉಪನ್ಯಾಸ ನೀಡುತ್ತಾ ದೇಶದಲ್ಲಿ ಸಾಮಾಜಿಕ ಪರಿವರ್ತನೆಗೆ ಬಹುದೊಡ್ಡ ಕೊಡುಗೆ ನೀಡಿದವರು ಡಾ. ಬಾಬು ಜಗಜೀವನ ರಾಂ ಅವರು ಎಂದರು, ಪ್ರಧಾನಿಯಾಗುವ ಎಲ್ಲ ಅರ್ಹತೆ ಇದ್ದರೂ ಪಟ್ಟಭದ್ರ ಹಿತಾಸಕ್ತಿಗಳ ಕಾರಣದಿಂದ ಆ ಪದವಿಯಿಂದ ವಂಚಿತರಾದರು. ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ಜಾರಿಗೆ ತರಲು ಯತ್ನಿಸಿದ ಅವರು, ಹಸಿರು ಕ್ರಾಂತಿಯ ಹರಿಕಾರರಾದರು. ಭಾರತೀಯ ಪರಂಪರೆಯಲ್ಲೂ ಅವರಿಗೆ ಅಪಾರ ನಂಬಿಕೆ ಇತ್ತು ಎಂದು ಅವರು ತಿಳಿಸಿದರು. ಪುತ್ತೂರು ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಬೆಟ್ಟ ಈಶ್ವರ ಭಟ್ ಅವರು ಮಾತನಾಡಿ, ದಲಿತರಿಗೆ ಮಂಜೂರಾದ ಜಮೀನನ್ನು ಬೇರೆಯವರಿಗೆ ಪರಭಾರೆ ಮಾಡುವುದನ್ನು ನಿರ್ಬಂಧಿಸಿ ಶಾಸನ ತರುವ ಮೂಲಕ ಬಾಬೂಜಿ ಅವರು ದಲಿತ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.
ಕೊಂಬೆಟ್ಟು ಆಶ್ರಮದ ಸಿಬ್ಬಂದಿ ಕೃಷ್ಣ ಬಿ ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಮಕೃಷ್ಣ ಭಟ್ ಕೆ. ವಂದಿಸಿದರು. ಕಾರ್ಮಿಕ ಇಲಾಖೆಯ ಸಿಬ್ಬಂದಿ ಚಿದಾನಂದ ಕಾಮತ್ ಕಾಸರಗೋಡು ಕಾರ್ಯಕ್ರಮ ನಿರ್ವಹಿಸಿದರು