×
Ad

ಉಪ್ಪಿನಂಗಡಿ: ಮೀನಿನ ತಲೆ ಮಾಂಸ ತಿಂದ 14 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲು

Update: 2016-04-05 17:25 IST

ಉಪ್ಪಿನಂಗಡಿ: ಸ್ಥಳೀಯ ಭಾಷೆಯಲ್ಲಿ ‘ಅಮುರು’ ಎಂದು ಕರೆಯಲ್ಪಡುವ ‘ಹಾಮೋರ್’ ಜಾತಿಗೆ ಸೇರಿದ ಈ ಮೀನಿನ ತಲೆ ಮಾಂಸ ತಿಂದು ಈ ಪರಿಸ್ಥಿತಿ ಎದುರಾಗಿದೆ. ವಿದೇಶದಲ್ಲಿ ಈ ಮೀನಿನ ಮಾಂಸಕ್ಕೆ ಭಾರೀ ಬೇಡಿಕೆಯಿದ್ದು, ದೊಡ್ಡ ಗಾತ್ರದ ಈ ಮೀನಿನ ದೇಹ ಭಾಗದ ಮಾಂಸವನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತದೆ. ಅದರ ತಲೆ ಭಾಗವನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. ಇದರ ತಲೆ ಮಾಂಸದಿಂದ ಕೂಡಾ ಸ್ವಾದಿಷ್ಟ ಪದಾರ್ಥ ತಯಾರಿಸಬಹುದಾಗಿದ್ದು, ಹಾಗಾಗಿ ಇದಕ್ಕೂ ಭಾರೀ ಬೇಡಿಕೆಯಿದೆ. ಹೆಚ್ಚಿನವರು ಇದನ್ನು ಕೇಳಿ ಪಡೆಯುತ್ತಾರೆ. ಮಂಗಳೂರಿನಿಂದ ಉಪ್ಪಿನಂಗಡಿ ಕಡೆಗೆ ಈ ಮೀನಿನ ತಲೆಯನ್ನು ಮೀನು ಮಾರಾಟಗಾರರು ತಂದು ಮಾರಾಟ ಮಾಡುತ್ತಿದ್ದು, ಕೂಟೇಲು ಬಳಿಯ ಎರಡು ಮನೆಯವರು ಇದನ್ನು ಖರೀದಿಸಿದ್ದಾರೆ. ಅದರ ಪದಾರ್ಥ ಮಾಡಿ ತಿಂದ ಕೆಲವೇ ಹೊತ್ತಿನಲ್ಲಿ ಈ ಎರಡೂ ಮನೆಯ ನಾಲ್ವರು ಮಕ್ಕಳು ಸೇರಿದಂತೆ ಎರಡೂ ಕುಟುಂಬದ 10 ಮಂದಿಗೆ ವಾಂತಿ- ಬೇಧಿ ಶುರುವಾಗಿದೆ. ಮೈಚರ್ಮ ಸ್ವಲ್ಪ ಸ್ವಲ್ಪವೇ ನೇರಳೆ ಬಣ್ಣಕ್ಕೆ ತಿರುಗಿದೆಯಲ್ಲದೆ, ಹೊತ್ತು ಕಳೆಯುತ್ತಲೇ ಉಸಿರಾಟ ತೊಂದರೆ, ಬಾಯಿ ಹಿಡಿದಂತಾಗಿ ಮಾತನಾಡಲೂ ಕಷ್ಟವಾಗುವ ಪರಿಸ್ಥಿತಿ ಹಾಗೂ ಮೈ ತುರಿಕೆ ಪ್ರಾರಂಭವಾಗಿದೆ. ಅಂಗೈ ಮತ್ತು ಕಾಲಡಿ ತುರಿಕೆ ಹೆಚ್ಚು ಕಂಡು ಬಂದಿದೆ. ತಕ್ಷಣವೇ ಇವರು ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಅಲ್ಲಿ ಚಿಕಿತ್ಸೆ ಪಡೆದ ಬಳಿಕ ಆರೋಗ್ಯದಲ್ಲಿ ಚೇತರಿಕೆಯಾಗಿದೆ. ಸೋಮವಾರ ಕೊಪ್ಪಳದ ನಿವಾಸಿಯೋರ್ವರೂ ಇದೇ ಮೀನಿನ ತಲೆ ಮಾಂಸವನ್ನು ಖರೀದಿಸಿದ್ದು, ಅವರ ಮನೆಯ 4 ಮಂದಿಗೂ ಇದೇ ಅನುಭವವಾಗಿದೆ. ಅವರೂ ಕೂಡಾ ಉಪ್ಪಿನಂಗಡಿಯ ಇದೇ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದಾರೆ.

ಈ ಮೀನಿನ ತಲೆ ಮಾಂಸವನ್ನು ಪದಾರ್ಥ ಮಾಡಿ ತಿನ್ನುತ್ತಿರುವುದು ಇದೇ ಮೊದಲಲ್ಲ. ಆದರೆ ಈಗ ಏಕಾಏಕಿ ಈ ಮೀನಿನ ತಲೆ ಮಾಂಸದ ಖಾದ್ಯದಿಂದ ಇಂತಹ ಸಮಸ್ಯೆ ಕಾಣಿಸಿಕೊಳ್ಳಲು ಹೇಗೆ ಸಾಧ್ಯ ಎಂಬುದಕ್ಕೆ ಯಾರಲ್ಲೂ ಸ್ಪಷ್ಟ ಉತ್ತರವಿಲ್ಲ. ಈಗ ದೊಡ್ಡ ಗಾತ್ರದ ಮೀನುಗಳನ್ನು ವಿಷದ ಇಂಜೆಕ್ಷನ್ ನೀಡಿ ಹಿಡಿಯಲಾಗುತ್ತದೆ. ಆದ್ದರಿಂದ ದೇಹದೊಳಗೆ ಹೋದ ಅದರ ವಿಷದ ಅಂಶ ತಲೆಯಲ್ಲಿ ಶೇಖರಗೊಂಡಿರುವುದರಿಂದ ಈ ರೀತಿಯಾಗಿರಬಹುದು ಅಥವಾ ಸಮುದ್ರಕ್ಕೆ ವಿಷ ಪದಾರ್ಥಗಳು ಸೇರಿ ಈ ರೀತಿ ಸಮಸ್ಯೆಯಾಗುತ್ತಿದೆ ಅಥವಾ ಮೀನು ಮಾರಾಟಗಾರರು ಮೀನು ಕೆಡದಂತೆ ಮಾಡಲು ಯಾವುದಾದರೂ ರಸಾಯನಿಕ ಹಾಕಿರಬಹುದು ಆದ್ದರಿಂದ ಅದನ್ನು ಸೇವಿಸಿದವರಿಗೆ ಈ ರೀತಿಯಾಗಿರಬಹುದು ಎನ್ನುತ್ತಾರೆ ಕೆಲವರು.
ಆದರೆ, ಇವರಿಗೆ ಚಿಕಿತ್ಸೆ ನೀಡಿರುವ ವೈದ್ಯ ಡಾ. ಎಂ.ಆರ್. ಶೆಣೈ ಅವರು ಇವರಿಗೆ ‘ಫುಡ್ ಫಾಯಿಸನ್’ ಆಗಿದೆ. ಕೆಲವೊಂದು ಆಹಾರ ಪದಾರ್ಥಗಳು ಕೆಲವರಿಗೆ ಆಗಿ ಬರುವುದಿಲ್ಲ. ಉದಾಹರಣೆಗೆ ಕೆಲವರಿಗೆ ಆಡು ಮಾಂಸ, ಅನಾನಾಸು ಮತ್ತಿತರ ಆಹಾರಗಳು ತಿಂದರೆ ಆಗುವುದಿಲ್ಲ. ಅಂಥವರು ಅದನ್ನು ತಿಂದರೆ ಅವರಿಗೆ ಅಲರ್ಜಿ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಲ್ಲಿಗೆ ಬಂದವರಿಗೆ ‘ಫುಡ್ ಫಾಯಿಸನ್’ ಔಷ ನೀಡಲಾಗಿದೆ. ಇದೀಗ ಎಲ್ಲರೂ ಚೇತರಿಸಿಕೊಂಡಿದ್ದಾರೆ ಎನ್ನುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News