×
Ad

ಕೊಣಾಜೆ: ಆಸಕ್ತಿಯ ಹಸಿವು ಕಲಾ ಸಾಮರ್ಥ್ಯವನ್ನು ರೂಪಿಸುತ್ತದೆ: ಜಬ್ಬಾರ್ ಸಮೋ

Update: 2016-04-05 20:54 IST

 ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಶಾರದಾ ಪದವಿ ಕಾಲೇಜಿನಲ್ಲಿ ಮಂಗಳವಾರ ನಡೆದ ‘ತಾಳಮದ್ದಳೆ-ಅರ್ಥಗಾರಿಕೆ’ ಎಂಬ ವಿಷಯದಲ್ಲಿ ಜಬ್ಬಾರ್ ಸಮೋ ಉಪನ್ಯಾಸ ನೀಡಿ ಮಾತನಾಡಿದರು.

ಕೊಣಾಜೆ: ಯಾವುದೇ ಕ್ಷೇತ್ರದಲ್ಲಿ ಪ್ರಾಥಮಿಕವಾಗಿ ಆಸಕ್ತಿಯ ಹಸಿವು ಕಲಾ ಸಾಮರ್ಥ್ಯವನ್ನು ರೂಪಿಸುತ್ತದೆ. ಹಾಗೆಯೇ ತಾಳಮದ್ದಳೆ ಅರ್ಥಧಾರಿಯಾಗಲು ಕೆಲವೊಂದು ಪ್ರಾಥಮಿಕ ಅರ್ಹತೆಯನ್ನು ಹೊಂದಬೇಕಾಗುತ್ತದೆ. ಪ್ರಮುಖವಾಗಿ ಈ ಕ್ಷೇತ್ರದಲ್ಲಿ ಆಸಕ್ತಿ, ಪ್ರಸಂಗಗಳ ಅಧ್ಯಯನ, ಪುರಾಣ ಜ್ಞಾನ ಹೀಗೆ ತನ್ನ ಅರಿವಿನ ಪರಿಧಿಯನ್ನು ವಿಸ್ತರಿಸಿಕೊಂಡು ಮುನ್ನಡೆಯಬೇಕಿದೆ. ಆಸಕ್ತಿ ಮತ್ತು ಅರಿವು ಈ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯವನ್ನು ರೂಪಿಸುತ್ತದೆ ಎಂದು ಪ್ರಸಿದ್ದ ತಾಳಮದ್ದಳೆ ಅರ್ಥಧಾರಿ ಜಬ್ಬಾರ್ ಸಮೋ ಅವರು ಅಭಿಪ್ರಾಯ ಪಟ್ಟರು.
   
    ಅವರು ಮಂಗಳವಾರ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಮಂಗಳೂರು ಕೊಡಿಯಾಲಬೈಲ್‌ನ ಶಾರದಾ ಪದವಿ ಕಾಲೇಜಿನಲ್ಲಿ ಯಕ್ಷಮಂಗಳ ಪ್ರಚಾರೋಪನ್ಯಾಸ ಮಾಲಿಕೆಯ ‘ತಾಳಮದ್ದಳೆ-ಅರ್ಥಗಾರಿಕೆ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿದರು. ಯಕ್ಷಗಾನದಲ್ಲಿ ಗುರು ಶಿಷ್ಯ ಪರಂಪರೆ ಇದ್ದ ಹಾಗೆ ಯಕ್ಷಗಾನದ ತಾಳಮದ್ದಳೆ ಕ್ಷೇತ್ರದಲ್ಲಿ ಗುರುಪರಂಪರೆಯು ಬೆಳೆದು ಬಾರದ ಹಿನ್ನೆಲೆಯಲ್ಲಿ ಈ ಕೇತ್ರದಲ್ಲಿ ಹೊಸಮುಖಗಳು ಅಥವಾ ಯುವಅರ್ಥಧಾರಿಗಳು ಮೂಡಿಬರುತ್ತಿಲ್ಲ ಎಂದು ಹೇಳಿದರು.
ಇಂದು ಯಕ್ಷಗಾನ, ತಾಳಮದ್ದಳೆ ಕ್ಷೇತ್ರ ಸೇರಿದಂತೆ ಪ್ರತಿಭೆಗಳು ಕೂಡಾ ಮಾರುಕಟ್ಟೆಯ ಸರಕುಗಳಾಗುತ್ತಿರುವುದು ದುರಂತವಾಗಿದೆ. ಈ ದೃಷ್ಠಿಕೋನವು ಬದಲಾಗುವುದರೊಂದಿಗೆ ಯುವ ಸಮುದಾಯ ಆಸಕ್ತಿಯೊಂದಿಗೆ ಯಕ್ಷಗಾನ ಮತ್ತು ತಾಳಮದ್ದಳೆ ಕ್ಷೇತ್ರದತ್ತ ಒಲವು ತೋರಿಸಿ ಕಲೆಯ ಶ್ರೀಮಂತಿಗೆ ಸಾಕ್ಷಿಯಾಗಬೇಕಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾರದಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕಬ್ಬಿನಾಳೆ ಬಾಲಕೃಷ್ಣ ಭಾರದ್ವಾಜ್, ಅವರು ಇತಿಹಾಸಲ್ಲಿ 13ನೇ ಶತಮಾನದಲ್ಲಿಯೇ ತಾಳಮದ್ದಳೆಯ ಸೇವೆಯು ನಡೆದಿರುವ ಬಗ್ಗೆ ಉಲ್ಲೇಖವಿದೆ. ಯಕ್ಷಗಾನ ಕೇತ್ರದಲ್ಲಿ ತಾಳಮದ್ದಳೆಯ ಪಾತ್ರವೂ ಪ್ರಮುಖವಾದುದು ಎಂದು ಹೇಳಿದರು.

ಮಂಗಳೂರು ವಿವಿಯ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಧನಂಜಯ ಕುಂಬ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾರದಾ ಕಾಲೇಜಿನ ಸಲಹಾ ಸಮಿತಿ ಸದಸ್ಯರಾದ ಡಾ.ಲೀಲಾ ಉಪಾಧ್ಯಾಯ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಪತಿ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯಕ್ಷಗಾನ ಅಧ್ಯಯನ ಕೇಂದ್ರದ ಸತೀಶ್ ಕೊಣಾಜೆ, ಶಾರದಾ ಕಾಲೇಜಿನ ಉಪಪ್ರಾಂಶುಪಾಲ ಮಾಧವ ಕೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಸುಚಿತ್ರಾ ಜಿ.ಎಸ್,ಸ್ವಾಗತಿಸಿ, ರಕ್ಷಿತ್ ಕುಮಾರ್ ವಂದಿಸಿದರು. ವರ್ಷಾ ವಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News