ಸರಕಾರದಿಂದ 25 ಪ್ರಾದೇಶಿಕ ವಿಮಾನ ನಿಲ್ದಾಣ ಅಭಿವೃದ್ಧಿ: ಅರುಣ್ ಜೇಟ್ಲಿ
ಹೊಸದಿಲ್ಲಿ, ಎ.5: ವಿಮಾನ ಸಂಪರ್ಕವನ್ನು ಸುಧಾರಿಸುವುದಕ್ಕಾಗಿ ಸರಕಾರವು 25 ಪ್ರಾದೇಶಿಕ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ನಿರ್ಧರಿಸಿದೆಯೆಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಇಂದಿಲ್ಲಿ ತಿಳಿಸಿದ್ದಾರೆ.
ಈ ವರ್ಷ ಇನ್ನೂ 25 ಪ್ರಾದೇಶಿಕ ವಿಮಾನ ನಿಲ್ದಾಣಗಳ ಗುರಿಯನ್ನು ತಾನು ಹಾಕಿಕೊಂಡಿದ್ದೇನೆಂದು ಅವರು ಹೇಳಿದ್ದಾರೆ.
ದಿಲ್ಲಿಯಲ್ಲಿ ನಡೆದ ಸಮ್ಮೇಳನವೊಂದರಲ್ಲಿ ಮಾತನಾಡಿದ ಜೇಟ್ಲಿ, ಮೂಲ ಸೌಕರ್ಯಕ್ಕೆ ದೀರ್ಘಾವಧಿ ನಿಧಿಯ ಅಗತ್ಯವಿದೆಯೆಂದು ಒತ್ತಿ ಹೇಳಿದರು.
ರಾಜ್ಯ ಸರಕಾರಗಳ ಮಾಲಕತ್ವದ 15 ಹಾಗೂ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ವಶದಲ್ಲಿರುವ 10 ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಸರಕಾರ ಚಿಂತಿಸುತ್ತಿದೆಯೆಂದು ಅವರು ತಿಳಿಸಿದರು.
ದೇಶದ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಸರಕಾರ ಕೈಗೊಂಡಿರುವ ಕ್ರಮಗಳ ಕುರಿತು ಮಾತನಾಡಿದ ಜೇಟ್ಲಿ, ಇಲ್ಲಿ ಸುಮಾರು 160 ಏರ್‌ಸ್ಟ್ರಿಪ್‌ಗಳು ಬಳಕೆಯಿಲ್ಲದೆ ಉಳಿದಿವೆ. ದಿಲ್ಲಿ ಹಾಗೂ ಮುಂಬೈ ವಿಮಾನ ನಿಲ್ದಾಣಗಳಿಂದ ಬರುವ ಹಣದಿಂದಲೇ ಎಎಐ ಸ್ವಂತ ನಿಧಿ ಹೂಡಲು ಸಾಧ್ಯ. ದಿಲ್ಲಿ ಹಾಗೂ ಮುಂಬೈಗಳ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಸಾರ್ವಜನಿಕ ಹಾಗೂ ಖಾಸಗಿ ಭಾಗಿದಾರಿಕೆಯಲ್ಲಿ ನಡೆಯುತ್ತಿದ್ದು, ಎಎಐ ಒಂದು ಪಾಲುದಾರನಾಗಿದೆಯೆಂದು ವಿವರಿಸಿದರು.
ಕೆಲವು ಅಭಿವೃದ್ಧಿಗೊಳಿಸಲಾಗಿರುವ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಹಾಗೂ ವ್ಯವಸ್ಥಾಪನಗಳನ್ನು ಖಾಸಗಿ ಸಂಸ್ಥೆಗಳಿಗೆ ನೀಡಲು ಸಾಧ್ಯವಿದೆ. ವಿಮಾನ ಪ್ರಯಾಣಿಕರ ಸಂಖ್ಯೆ ಏರುತ್ತಿದ್ದು, ವಿಶೇಷವಾಗಿ ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವ ಮೂಲಕ ವಾಯು ಯಾನ ವಲಯಕ್ಕೆ ಉತ್ತೇಜನ ನೀಡುವ ಮಾರ್ಗಗಳ ಬಗ್ಗೆ ಸರಕಾರ ಕೆಲಸ ಮಾಡುತ್ತಿದೆ. ಅಂತಿಮಗೊಳಿಸುವ ಹಂತದಲ್ಲಿರುವ ಕುರಿತು ನಾಗರಿಕ ವಿಮಾನ ಯಾನ ನೀತಿಯಲ್ಲಿ, ಪ್ರಾದೇಶಿಕ ವಿಮಾನ ಸಂಪರ್ಕವನ್ನು ಹೆಚ್ಚಿಸುವ ವಿವಿಧ ಕ್ರಮಗಳನ್ನು ಮುಂದಿರಿಸಲಾಗಿದೆಯೆಂದು ಜೇಟ್ಲಿ ಹೇಳಿದರು.