ಚಿನ್ನಾಭರಣ ವ್ಯಾಪಾರಿಗಳ ಮುಷ್ಕರ
ಹೊಸದಿಲ್ಲಿ,ಎ.5: ಚಿನ್ನಾಭರಣ ವ್ಯಾಪಾರಿಗಳು ತೀವ್ರ ನಷ್ಟ ಅನುಭವಿಸುತ್ತಿದ್ದರೂ ಚಿನ್ನಾಭರಣಗಳ ಮೇಲೆ ಶೇ.1 ಅಬಕಾರಿ ಸುಂಕವನ್ನು ವಿರೋಧಿಸಿ ನಡೆಯುತ್ತಿರುವ ಮುಷ್ಕರ ಮಂಗಳವಾರವೂ ಮುಂದುವರಿದಿದೆ. ದಿಲ್ಲಿ,ಮುಂಬೈ ಮತ್ತು ಕೋಲ್ಕತಾ ಸೇರಿದಂತೆ ದೇಶದ ಹಲವಾರು ಭಾಗಗಳಲ್ಲಿ ಚಿನ್ನಾಭರಣ ವ್ಯಾಪಾರಿಗಳು 35ನೆ ದಿನವೂ ತಮ್ಮ ಅಂಗಡಿಗಳನ್ನು ಮುಚ್ಚಿದ್ದರು.
ಹಾಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ಉದ್ಯಮವು ವ್ಯವಹಾರ ನಷ್ಟವನ್ನು ಅನುಭವಿಸುತ್ತಿದೆ ಮತ್ತು ಚಿನ್ನಾಭರಣ ವ್ಯಾಪಾರದೊಂದಿಗೆ ಗುರುತಿಸಿಕೊಂಡಿರುವ ಕುಶಲಕರ್ಮಿಗಳು ಸೇರಿದಂತೆ ಕೆಲಸಗಾರರು ಈಗ ಹೊಟ್ಟೆಪಾಡಿನ ಸಮಸ್ಯೆಯನ್ನೆದುರಿಸುತ್ತಿದ್ದಾರೆ ಎಂದು ಅಖಿಲ ಭಾರತ ಸರಾಫ ಸಂಘದ ಉಪಾಧ್ಯಕ್ಷ ಸುರಿಂದರ್ ಕುಮಾರ ಜೈನ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಆದರೆ ತಮಿಳುನಾಡು ಸುದೀರ್ಘ ಮುಷ್ಕರದ ಕುರಿತು ಅಪಸ್ವರವೆತ್ತಿದ್ದು, ಆ ರಾಜ್ಯದಲ್ಲಿ ಹೆಚ್ಚಿನ ಚಿನ್ನಾಭರಣ ಅಂಗಡಿಗಳು ವ್ಯಾಪಾರವನ್ನು ಪುನರಾರಂಭಿಸಿವೆ.
ತನ್ಮಧ್ಯೆ ಶೇ.1 ಅಬಕಾರಿ ಸುಂಕ ಹೆಚ್ಚಳದ ಬಜೆಟ್ ಪ್ರಸ್ತಾವನೆಯನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸಲು ಚಿನ್ನಾಭರಣ ವ್ಯಾಪಾರಿಗಳು ಬುಧವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ ಸಾಧ್ಯತೆಯಿದೆ.
ಚಿನ್ನಾಭರಣ ವ್ಯಾಪಾರಿಗಳ ಬೇಡಿಕೆಗಳನ್ನು ಪರಿಶೀಲಿಸಲು ಸರಕಾರವು ಈಗಾಗಲೇ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅಶೋಕ ಲಾಹಿರಿ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ. 60 ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.