×
Ad

ಪಠಾಣ್ ಕೋಟ್ ಭಯೋತ್ಪಾದಕ ದಾಳಿ: ಭಾರತವೇ ನಡೆಸಿದ ನಾಟಕ!

Update: 2016-04-05 23:43 IST

ಪಾಕ್ ತನಿಖಾ ತಂಡ ಪ್ರತಿಪಾದಿಸುವ ಸಾಧ್ಯತೆ: ಮಾಧ್ಯಮ ವರದಿ

ಹೊಸದಿಲ್ಲಿ, ಎ.5: ಪಠಾಣ್ ಕೋಟ್ ವಾಯು ನೆಲೆಯ ಮೇಲಿನ ಭಯೋತ್ಪಾದಕ ದಾಳಿಯು ‘ಪಾಕಿಸ್ತಾನದ ಹೆಸರು ಕೆಡಿಸುವುದಕ್ಕಾಗಿ’ ಭಾರತವೇ ಆಡಿದ ‘ನಾಟಕವೆಂದು’ ವಾಯುನೆಲೆಗೆ ಭೇಟಿ ನೀಡಿದ್ದ ಪಾಕಿಸ್ತಾನದ ತನಿಖಾ ತಂಡವು ಘೋಷಿಸುವ ಸಂಭವವಿದೆಯೆಂದು ಮಾಧ್ಯಮ ವರದಿಯೊಂದರಿಂದ ತಿಳಿದು ಬಂದಿದೆ. ಹೀಗಾದಲ್ಲಿ ಭಾರತ-ಪಾಕಿಸ್ತಾನಗಳ ನಡುವಿನ ಸಂಬಂಧ ಇನ್ನಷ್ಟು ಹದಗೆಡುವ ಸಾಧ್ಯತೆಯಿದೆ.

ದಾಳಿಯು ಪಾಕಿಸ್ತಾನದ ಹೆಸರಿಗೆ ಕಳಂಕ ತರಲು ನಡೆಸಿದ ನಾಟಕವಾಗಿತ್ತು ಎಂದು ಪಾಕಿಸ್ತಾನದ ಜಂಟಿ ತನಿಖಾ ತಂಡ (ಜೆಐಟಿ) ಸಿದ್ಧಪಡಿಸಿರುವ ವರದಿಯಲ್ಲಿ ಹೇಳಿದೆಯೆಂದು ‘ಪಾಕಿಸ್ತಾನ ಟುಡೇ’ ಉಲ್ಲೇಖಿಸಿದೆ. ದಾಳಿಕಾರರು ಪಾಕಿಸ್ತಾನದಿಂದ ಬಂದವರೆಂಬುದನ್ನು ಸಾಬೀತು ಪಡಿಸುವುದಕ್ಕೂ ಭಾರತದ ಅಧಿಕಾರಿಗಳು ವಿಫಲರಾಗಿದ್ದಾರೆಂದು ವರದಿ ತಿಳಿಸಿದೆಯೆಂದೂ ಅದು ಹೇಳಿದೆ.

ಇದು ಐಎಸ್‌ಐ ಹಾಗೂ ಪಾಕಿಸ್ತಾನ ಸೇನೆಗಳ ಮಾಮೂಲು ಪ್ರತಿಪಾದನೆ ಹಾಗೂ ಎರಡು ನಾಲಗೆಗಳ ಮಾತಾಗಿದೆಯೆಂದು ಭಾರತ ಸರಕಾರದ ಮೂಲಗಳು ದೃಢವಾಗಿ ಪ್ರತಿಕ್ರಿಯಿಸಿವೆ.

ಅಪರಾಧಿಗಳನ್ನು ಗುರುತಿಸಲು ಹಾಗೂ ಶಿಕ್ಷಿಸಲು ಭಾರತದೊಂದಿಗೆ ಕೆಲಸ ಮಾಡುವ ಬದ್ಧತೆಯ ಭಾಗವಾಗಿ ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ತನಿಖಾ ತಂಡವನ್ನು ಭಾರತಕ್ಕೆ ಕಳುಹಿಸಿದ್ದರು.

ಭಾರತವು ಒದಗಿಸಿರುವ ಸಾಕ್ಷವು ದಾಳಿಯಲ್ಲಿ ಜೈಶೆ ಮುಹಮ್ಮದ್‌ನ ಪಾತ್ರವನ್ನು ಸಾಬೀತುಪಡಿಸುತ್ತಿದೆಯೇ ಎಂಬ ಕುರಿತಾಗಿ ಪಾಕಿಸ್ತಾನ ಯಾವುದೇ ಬದ್ಧತೆಯನ್ನು ತೋರಿಸಿಲ್ಲವೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News