3 ತಿಂಗಳಲ್ಲಿ 18 ಚಾಲನಾ ಪರವಾನಿಗೆ ರದ್ದತಿಗೆ ಶಿಫಾರಸು: ಎಸ್ಪಿ
ಮಂಗಳೂರು, ಎ. 6: ದ.ಕ. ಜಿಲ್ಲಾ ಪೊಲೀಸ್ ಇಲಾಖಾ ವ್ಯಾಪ್ತಿಯಲ್ಲಿ ಪ್ರಮುಖವಾಗಿ ಅಪಘಾತ ಪ್ರಕರಣಗಳ ಸಂದರ್ಭ ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿ ಜನವರಿಯಿಂದ ಮಾರ್ಚ್ 28ರವರೆಗೆ ಒಟ್ಟು 18 ಮಂದಿಯ ಚಾಲನಾ ಪರವಾನಿಗೆ ರದ್ದತಿಗೆ ಪ್ರಾದೇಶಿಕ ಸಾರಿಗೆ ಆಯುಕ್ತರಿಗೆ ಶಿಫಾರಸು ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ.
ದಲಿತ ಕುಂದುಕೊರತೆಗಳ ಜಿಲ್ಲಾ ಮಟ್ಟದ ಮಾಸಿಕ ಸಭೆಯ ಬಳಿಕ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು ಕಳೆದ ವರ್ಷ 86 ಚಾಲನಾ ಪರವಾನಿಗೆ ರದ್ದತಿಗೆ ಶಿಫಾರಸು ಮಾಡಲಾಗಿತ್ತು ಎಂದು ಹೇಳಿದರು.
ಹೆಲ್ಮೆಟ್ ರಹಿತ ಪ್ರಯಾಣ:
ಫೆಬ್ರವರಿ ತಿಂಗಳೊಂದರಲ್ಲೇ 5687 ಪ್ರಕರಣ ದಾಖಲು ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯವನ್ನು ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಫೆಬ್ರವರಿ ತಿಂಗಳಿನಿಂದ ಜಾರಿಗೊಳಿಸಲಾಗಿದ್ದು, ಆ ತಿಂಗಳೊಂದರಲ್ಲೇ 5687 ಪ್ರಕರಣಗಳನ್ನು ದಾಖಲಿಸಿ 5,98,400 ರೂ. ದಂಡ ಸಂಗ್ರಹಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.
ಟ್ಯಾಂಕರ್ ದುರಂತದ ವೇಳೆ ತೆರವಿಗೆ ವಿಳಂಬ
ಜಿಲ್ಲೆಯ ಹೆದ್ದಾರಿಗಳಲ್ಲಿ ಟ್ಯಾಂಕರ್‌ಗಳು ಪಲ್ಟಿಯಾಗಿ ದುರಂತ ಸಂಭವಿಸುವ ಸಂದರ್ಭ ಅವುಗಳನ್ನು ತೆರವುಗೊಳಿಸಲು ಪ್ರಸ್ತುತ ಸಾಕಷ್ಟು ವಿಳಂಬವಾಗುತ್ತಿದೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಕುರಿತು ಹಾಗೂ ಟ್ಯಾಂಕರ್‌ಗಳ ಸಂಚಾರದ ಸಂದರ್ಭ ಪಾಲಿಸಬೇಕಾದ ನಿಯಮಗಳ ಕುರಿತಂತೆ ಸಂಬಂಧಪಟ್ಟವರ ಜತೆ ಶೀಘ್ರದಲ್ಲೇ ಸಮಾಲೋಚನೆ ನಡೆಸಲಾಗುವುದು ಎಂದು ಡಾ. ಶರಣಪ್ಪ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಅನಿಲ ಟ್ಯಾಂಕರ್‌ಗಳು ದುರಂತಕ್ಕೀಡಾದ ಸಂದರ್ಭ ಅದರಲ್ಲಿರುವ ಅನಿಲವನ್ನು ಸುರಕ್ಷಿತವಾಗಿ ರಿಫಿಲ್ ಮಾಡುವ ಹಾಗೂ ದುರಂತಕ್ಕೀಡಾದ ಬೃಹತ್ ಟ್ಯಾಂಕರನ್ನು ಸ್ಥಳದಿಂದ ತೆರವುಗೊಳಿಸಲು ಪ್ರಸ್ತುತ 8ರಿಂದ 12 ತಾಸುಗಳು ತಗಲುತ್ತವೆ. ದುರಂತಕ್ಕೀಡಾದ ಟ್ಯಾಂಕರ್‌ನಿಂದ ಅನಿಲ ಸೋರಿಕೆ ಆಗದಂತೆ ಅದರಿಂದ ಯಾವುದೇ ಅವಘಡ ಸಂಭವಿಸದಂತೆ ಜಾಗೃತೆ ವಹಿಸುವ ಮೂಲಕ ವಿಶೇಷ ಸಾಧನದ ಮೂಲಕ ತೆರವು ಕಾರ್ಯ ನಡೆಯಬೇಕಾಗಿರುವುದರಿಂದ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಕಾರ್ಯ ಆದಲ್ಲಿ ಈ ಸಮಸ್ಯೆಗೆ ಪರಿಹಾರ ಕಾಣಬಹುದಾಗಿದೆ ಎಂದು ಅವರು ಅಭಿಪ್ರಾಯಿಸಿದರು.