×
Ad

ಎಸಿಬಿ ರದ್ದು ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ ಪುತ್ತೂರು ನಗರಸಭೆ ಮುಂಭಾಗ ಬಿಜೆಪಿ ಪ್ರತಿಭಟನೆ

Update: 2016-04-06 18:46 IST

ಪುತ್ತೂರು: ಭ್ರಷ್ಟಾಚಾರವನ್ನು ಪೋಷಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಲೋಕಾಯುಕ್ತವನ್ನು ಕಡೆಗಣಿಸಿ ಎಸಿಬಿ ಸಂಸ್ಥೆ ಸ್ಥಾಪನೆಗೆ ಮುಂದಾಗಿದ್ದು, ತಕ್ಷಣವೇ ಸರ್ಕಾರ ತನ್ನ ನಿಲುವನ್ನು ಬದಲಾವಣೆಗೊಳಿಸಿ ಲೋಕಾಯುಕ್ತರನ್ನು ನೇಮಿಸಬೇಕು. ಈ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಹಿಸಂಗ್ರಹ ಅಭಿಯಾನ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು ಹೇಳಿದರು.
ಅವರು ರಾಜ್ಯ ಸರ್ಕಾರ ಜಾರಿಗೆ ತಂದ ಎಸಿಬಿಯನ್ನು ವಿರೋಧಿಸಿ ಪುತ್ತೂರು ನಗರಸಭೆ ಮುಂಭಾಗ ಬಿಜೆಪಿ ಪಕ್ಷದ ವತಿಯಿಂದ ಬುಧವಾರ ನಡೆದ ಪ್ರತಿಭಟನೆ ಹಾಗೂ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಎಸಿಬಿ ರದ್ದು ಪಡಿಸುವಂತೆ ಆಗ್ರಹಿಸಿ ಸಂಗ್ರಹಿಸುವ ಸಹಿಯನ್ನು ರಾಜ್ಯಪಾಲ ಹಾಗೂ ರಾಷ್ಟ್ರಪತಿಗೆ ಕಳುಹಿಸಲಾಗುವುದು ಎಂದ ಅವರು ಲೋಕಾಯುಕ್ತ, ಸಿಒಡಿ, ಕೇಂದ್ರದ ಸಿಬಿಐ ಇರುವಾಗ ಎಸಿಬಿ ಎಂಬ ಹೊಸ ಸಂಸ್ಥೆಯ ಅಗತ್ಯ ಇರಲಿಲ್ಲ. ಲೋಕಾಯುಕ್ತಕ್ಕೆ ಇನ್ನಷ್ಟು ಬಲ ತುಂಬುವ ಕೆಲಸ ಆಗಬೇಕಿತ್ತು. ವಿಧಾನಸಭೆ, ವಿಧಾನಪರಿಷತ್‌ನಲ್ಲಿ ಒಕ್ಕೊರಲ ವಿರೋಧ ಕೇಳಿಬಂದಿದೆ. ಹಾಗಿದ್ದು ರಾಜ್ಯ ಸರ್ಕಾರ ಎಸಿಬಿಯನ್ನು ಜಾರಿಗೆ ತಂದಿದೆ. ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ಬೀದಿಗಿಳಿದು ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.
ವಿದ್ಯಾರ್ಥಿಗಳ ನಿದ್ದೆಗೆಡಿಸುವ ಪ್ರಯತ್ನವನ್ನೂ ರಾಜ್ಯ ಸರ್ಕಾರ ಮಾಡಿದೆ. ಎರಡು ಬಾರಿ ಪ್ರಶ್ನಾಪತ್ರಿಕೆ ಸೋರಿಕೆ ಆಗಿರುವುದು ಸರ್ಕಾರದ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದ್ದು, ಸಚಿವರ ಕಾರ್ಯಾಲಯದಿಂದಲೇ ಪ್ರಶ್ನೆ ಪತ್ರಿಕೆ ಸೋರಿಕೆಯ ಭ್ರಷ್ಟಾಚಾರ ನಡೆದಿರುವುದು ಬಹಿರಂಗಗೊಂಡಿದೆ. ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಕುವುದೇ ಬಿಜೆಪಿಯ ಗುರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಪುತ್ತೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ನಗರಸಭೆ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶೈಲಜಾ ಕೆ.ಟಿ. ಭಟ್, ಪ್ರಖಂಡ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ, ನಗರ ಸಭಾ ಸದಸ್ಯ ರಾಜೇಶ್ ಬನ್ನೂರು, ತಾ.ಪಂ. ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ, ಮೀನಾಕ್ಷಿ ಮಂಜುನಾಥ್, ಪಕ್ಷದ ಪ್ರಮುಖರಾದ ಚನಿಲ ತಿಮ್ಮಪ್ಪ ಶೆಟ್ಟಿ, ಆರ್.ಸಿ.ನಾರಾಯಣ್, ಗೌರಿ ಬನ್ನೂರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News