×
Ad

ನಿನ್ನಿಕಲ್ಲು- ಉದ್ದಮಜಲು ಸಂಪರ್ಕ ಧರೆ ಕುಸಿತ: ರಸ್ತೆ ಸಂಚಾರಕ್ಕೆ ಅಡ್ಡಿ, ನೀರು ಟ್ಯಾಂಕ್ ಕುಸಿತ ಭೀತಿ

Update: 2016-04-06 18:55 IST

ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ಹಾಗೂ ಉದ್ದ ಮಜಲು ಸಂಪರ್ಕ ರಸ್ತೆಯಂಚಿನಲ್ಲಿದ್ದ ಧರೆ ಬುಧವಾರ ನಸುಕಿನ ಜಾವ ಕುಸಿದು ಬಿದ್ದಿದ್ದು, ಇದರಿಂದ ಒಂದೆಡೆ ರಸ್ತೆ ಸಂಚಾರಕ್ಕೆ ಅಡಚಣೆಯಾದರೆ, ಇನ್ನೊಂದೆಡೆ ಧರೆಯಲ್ಲಿದ್ದ ಕುಡಿಯುವ ನೀರಿನ ಟ್ಯಾಂಕ್ ಅಪಾಯದಂಚಿಗೆ ಸಿಲುಕಿದೆ.
ಕಳೆದ 25 ವರ್ಷಗಳ ಹಿಂದೆ ಜಿಲ್ಲಾ ಪರಿಷತ್‌ನ ಅವಧಿಯಲ್ಲಿ ನಿನ್ನಿಕಲ್ಲು ಆಸುಪಾಸಿನ 75 ಮನೆಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವುದಕ್ಕಾಗಿ ಗುಡ್ಡದ ಮೇಲೊಂದು 25 ಸಾವಿರ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಟ್ಯಾಂಕ್ ಅನ್ನು ನಿರ್ಮಿಸಲಾಗಿತ್ತು. ಆದರೆ ಕಾಲಕಳೆದಂತೆ ಜನಸಂಖ್ಯಾ ಹೆಚ್ಚಳ ಹಾಗೂ ಜನಸೌಕರ್ಯಕ್ಕಾಗಿ ನಿನ್ನಿಕಲ್ಲು ಹಾಗೂ ಉದ್ದಮಜಲು ಸಂಪರ್ಕ ರಸ್ತೆಯನ್ನು ಹಿರೇಬಂಡಾಡಿ ಗ್ರಾಮ ಪಂಚಾಯತ್ ಈ ಗುಡ್ಡವನ್ನು ಅಗೆದು ನಿರ್ಮಿಸಿತು. ಟ್ಯಾಂಕ್ ಬಳಿಯೇ ರಸ್ತೆ ನಿರ್ಮಾಣವಾದುದರಿಂದ ಕೆಳಗಡೆ ರಸ್ತೆ, ಮೇಲ್ಗಡೆ ಧರೆಯ ಮೇಲೆ ಟ್ಯಾಂಕ್ ಇರುವಂತಾಯಿತು. ಇಂದು ನಸುಕಿನ ಜಾವ ಟ್ಯಾಂಕ್ ಇರುವ ಧರೆ ಏಕಾಏಕಿ ಕುಸಿದು ಬಿದ್ದಿದ್ದು, ಮಣ್ಣೆಲ್ಲಾ ರಸ್ತೆಗೆ ಬಿದ್ದು ರಸ್ತೆ ಬಂದ್ ಆಗಿತ್ತು. ಅಲ್ಲದೇ, ನೀರಿನ ಪೈಪ್‌ಗಳೆಲ್ಲಾ ಒಡೆದು ಹೋಗಿ ರಸ್ತೆಯಲ್ಲೆಲ್ಲಾ ನೀರು ಹರಿದು ಹೋಗಿತ್ತು.
ಸುದ್ದಿ ತಿಳಿದು ಬೆಳಗ್ಗೆ ಸ್ಥಳಕ್ಕೆ ತೆರಳಿದ ಉಪ್ಪಿನಂಗಡಿ ಗ್ರಾಮ ಪಂಚಾಯತ್‌ನ ಬಿಲ್‌ಕಲೆಕ್ಟರ್ ಇಸಾಕ್ ಹಾಗೂ ಸಿಬ್ಬಂದಿ ಅಬ್ಬಾಸ್ ರಸ್ತೆಯಲ್ಲಿ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಿದರು. ಸ್ಥಳಕ್ಕೆ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಗೋಪಾಲ ಹೆಗ್ಡೆ, ರಮೇಶ, ಕವಿತಾ, ಸುಂದರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಅಸಾಫ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಪತ್ರಿಕೆಯೊಂದಿಗೆ ಮಾತನಾಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಅಸಾಫ್, ಈ ಬಗ್ಗೆ ಜಿಲ್ಲಾ ಪಂಚಾಯತ್ ಎಂಜಿನಿಯರ್ ಇಲಾಖೆಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಟ್ಯಾಂಕ್‌ನ ಧರೆ ಕುಸಿತದಿಂದ ಆ ಭಾಗದ ಜನರಿಗೆ ನೀರು ಕಡಿತಗೊಂಡಿದ್ದು, ಇನ್ನೊಂದೆಡೆ ಲಕ್ಷಾಂತರ ರೂಪಾಯಿಯ ಟ್ಯಾಂಕ್ ಕೂಡಾ ಈಗ ಅಪಾದಂಚಿನಲ್ಲಿದೆ. ಆದ್ದರಿಂದ ಸಂಬಂಧಿತ ಇಲಾಖೆ ಕೂಡಲೇ ಎಚ್ಚೆತ್ತುಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News