ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಮಕ್ಕಳ ಕಲರವ ಪುಟಾಣಿಗಳ ಪ್ರಶ್ನೆಗೆ ಸಮಾಧಾನದಿಂದ ಉತ್ತರಿಸಿದ ಪೊಲೀಸರು
ಬಂಟ್ವಾಳ: ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ಮಕ್ಕಳದ್ದೇ ಸಾಮ್ರಾಜ್ಯ. ಪೊಲೀಸರನ್ನು ಕಂಡು ಭಯ ಪಡುವ ಮಕ್ಕಳು ಅವರ ಸನಿಹದಲ್ಲೇ ನಿಂತು ಠಾಣೆಯ ಕಾರ್ಯಚಟವಿಕೆಯನ್ನು ಗಮನಿಸಿದರು, ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ ಸಂದೇಹ ನಿವಾರಿಸಿಕೊಂಡರು. ಮಕ್ಕಳ ಎಲ್ಲಾ ಪ್ರಶ್ನೆಗಳಿಗೂ ಎಸೈ ಸಹಿತ ಠಾಣಾ ಸಿಬ್ಬಂದಿಗಳು ಸಮಾಧಾನದಿಂದಲೇ ಉತ್ತರಿಸಿ ಇದು ಮಗು ಸ್ನೇಹಿ ಪೊಲೀಸ್ ಠಾಣೆ ಎಂಬುದನ್ನು ಸಾಕ್ಷೀಕರಿಸಿದರು.
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಹಾಗೂ ಪತ್ರಕರ್ತರ ಸಂಘದ ರಜತವರ್ಷಾಚರಣಾ ಸಮಿತಿ ಆಶ್ರಯದಲ್ಲಿ ರಜತಾ ವರ್ಷಾಚರಣೆ ಪ್ರಯುಕ್ತ ನಡೆದ ಮಕ್ಕಳ ಬೇಸಿಗೆ ಶಿಬಿರದಲ್ಲಿ ಪೊಲೀಸ್ ಠಾಣೆಗೆ ಭೇಟಿ ಹಾಗೂ ಪೊಲೀಸರೊಂದಿಗೆ ಸಂವಾದ ಕಾರ್ಯಕ್ರದಮಲ್ಲಿ ಈ ಅಪರೂಪದ ದೃಶ್ಯ ಕಂಡು ಬಂತು.
23 ಶಾಲೆಯ ಒಟ್ಟು 52 ಮಂದಿ ಶಿಬಿರಾರ್ಥಿಗಳು ಪೊಲೀಸ್ ಠಾಣಾ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಠಾಣೆಯ ಕಾರ್ಯಚಟುವಟಿಕೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ನಗರ ಠಾಣಾ ಉಪನಿರೀಕ್ಷಕ ನಂದಕುಮಾರ್ ಅಗತ್ಯ ಮಾಹಿತಿಗಳನ್ನು ಶಿಬಿರಾರ್ಥಿಗಳಿಗೆ ವಿವರಿಸಿದರು.
ಅಪರಾಧ ತಡೆ ಮುಂಜಾಗ್ರತೆ ಕ್ರಮಗಳು, ಠಾಣೆಯಲ್ಲಿನ ವಿವಿಧ ಉಪಕರಣಗಳು, ಬಂಧಿಖಾನೆ, ವಯರ್‌ಲೆಸ್, ಗನ್‌ಗಳ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು. ಸಂಚಾರಿ ಠಾಣಾ ಉಪನಿರೀಕ್ಷಕ ಚಂದ್ರಶೇಖರಯ್ಯ ಸಂಚಾರಿ ನಿಯಮಗಳ ಪಾಲನೆ ಹಾಗೂ ಇಂಟರ್‌ಸೆಪ್ಟರ್ ವಾಹನದ ಬಗ್ಗೆ ಮಾಹಿತಿ ನೀಡಿದರು. ಗ್ರಾಮಾಂತರ ಠಾಣಾ ಉಪ ನಿರೀಕ್ಷಕ ರಕ್ಷಿತ್ ಎ.ಕೆ. ಹಾಜರಿದ್ದು ಪೂರಕ ಮಾಹಿತಿ ನೀಡಿದರು. ಈ ಸಂದರ್ಭ ರಜತಾ ವರ್ಷಾಚರಣ ಸಮಿತಿ ಕಾರ್ಯಧ್ಯಕ್ಷ ಮೌನೇಶ್ ವಿಶ್ವಕರ್ಮ, ಸಂಚಾಲಕ ಹರೀಶ್ ಮಾಂಬಾಡಿ, ಪ್ರಧಾನ ಕಾರ್ಯದರ್ಶಿ ಸಂದೀಪ್ ಸಾಲ್ಯಾನ್, ಕೋಶಾಧಿಕಾರಿ ಕಿಶೋರ್ ಪೆರಾಜೆ, ಕ್ರೀಡಾ ಕಾರ್ಯದರ್ಶಿ ಯಾದವ ಅಗ್ರಬೈಲು, ಅಶ್ರಫ್ ಪಿ.ಎಂ. ಹಾಗೂ ನಗರ ಠಾಣೆಯ ಎಎಸೈಗಳಾದ ಶಾಂತಪ್ಪ, ಸೇಸಮ್ಮ, ಸಂಜೀವ ಸಿಬ್ಬಂದಿಗಳಾದ ಅಬ್ದುಲ್ ಕರೀಂ, ಸುಬ್ರಾಯ, ಲೋಕೇಶ, ಕೃಷ್ಣ, ಪ್ರಶಾಂತ್, ಚಿತ್ರಲೇಖಾ, ತುಂಗಮ್ಮ, ಮುರ್ಗೆಶ್, ಸಂಚಾರಿ ಠಾಣಾ ಎಎಸೈ ರಾಮನಾಯಕ್, ಕೃಷ್ಣ ನಾಯಕ್ ಮತತಿತರರು ಹಾಜರಿದ್ದರು.