ಬಾಳಿಗಾ ಹೆಸರಿನಲ್ಲಿ ಟ್ರಸ್ಟ್ ರಚಿಸಿ ಹೋರಾಟ: ರವೀಂದ್ರ ಕಾಮತ್
ಮಂಗಳೂರು, ಎ. 6: ದುಷ್ಕರ್ಮಿಗಳಿಂದ ಇತ್ತೀಚೆಗೆ ಹತ್ಯಗೀಡಾದ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾ ಅವರ ಹೆಸರಿನಲ್ಲಿ 1 ಕೋಟಿ ರೂ. ನಿಧಿ ಸಂಗ್ರಹಿಸಿ ಟ್ರಸ್ಟ್ ರಚನೆ ಮಾಡಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಹೈಕೋರ್ಟ್‌ನ ವಕೀಲ ರವೀಂದ್ರನಾಥ್ ಕಾಮತ್ ಹೇಳಿದ್ದಾರೆ.
ಅವರು ಇಂದು ವಿನಾಯಕ ಬಾಳಿಗಾ ಮನೆಯಲ್ಲಿ ನಡೆದ ವಿವಿಧ ಸಂಘಟನೆಗಳ ಮುಖಂಡರ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದರು.
ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ಅಕ್ರಮಗಳ ವಿರುದ್ಧ ಹಾಗೂ ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಬಾಳಿಗಾರ ಹೆಸರಿನಲ್ಲಿ ಜಿಎಸ್‌ಬಿ ಸಮಾಜ ಬಾಂಧವರಿಂದ ಹಾಗೂ ಇತರರ ಮೂಲಕ ಈ ನಿಧಿ ಸಂಗ್ರಹಿಸಿ ಹೋರಾಟಕ್ಕೆ ಬಳಸಲಾಗುದು. ಸಂಗ್ರಹವಾದ ಈ ಹಣದಲ್ಲಿ 50 ಲಕ್ಷ ರೂ. ಬಾಳಿಗಾರ ತಂದೆ-ತಾಯಿ ಹೆಸರಿನಲ್ಲಿ ನಿರಖು ಠೇವಣಿ ಇಡಲಾಗುವುದು. ಉಳಿದ 50 ಲಕ್ಷ ರೂ. ಹಣದಲ್ಲಿ ಟ್ರಸ್ಟ್ ರಚೆನ ಮಾಡಿ ಬಾಳಿಗಾರ ಹೋರಾಟವನ್ನು ಮುಂದುವರಿಸುವುದಾಗಿ ರವೀಂದ್ರನಾಥ್ ಕಾಮತ್ ಹೇಳಿದರು.
ವಿನಾಯಕ ಬಾಳಿಗಾ ಅವರು ಸ್ವಾರ್ಥಕ್ಕಾಗಿ ಅಲ್ಲ, ಸಮಾಜಕ್ಕಾಗಿ ಹೋರಾಟ ಮಾಡಿದವರು. ದೇವಳದಲ್ಲಿ ಆದ ಅವ್ಯವಹಾರ ಬಯಲಿಗೆಳೆದಿದ್ದೇ ಅವರ ದುರಂತಕ್ಕೆ ಕಾರಣವಾಗಿದೆ. ಈ ನಿಧಿಯಿಂದ ಬಾಳಿಗಾರ ಹೋರಾಟವನ್ನು ಮುಂದುವರಿಸುವುದು ಮಾತರವಲ್ಲದೆ, ಈ ಮೂಲಕ ಆರ್‌ಟಿಐ ಕಾರ್ಯಕರ್ತರಿಗೆ ಮತ್ತಷ್ಟು ಆತ್ಮಸ್ಥೈರ್ಯ ತುಂಬಿಸುವ ಕೆಲಸವಾಗಲಿದೆ ಎಂದು ಅವರು ಹೇಳಿದರು.
ವಕೀಲ ಕೆ.ಪಿ. ವಾಸುದೇವರಾವ್ ಮಾತನಾಡಿ, ಕಾರ್‌ಸ್ಟ್ರೀಟ್‌ನ ಅನಧಿಕೃತ ಬಿಲ್ಡಿಂಗ್, 42 ಸೆಂಟ್ಸ್ ಜಾಗದ ಸೇಲ್ ಡೀಡ್ ವಿಷಯ, ದೇವಸ್ಥಾನದ ಲೆಕ್ಕಪತ್ರ ಅವ್ಯವಹಾರ ವಿರುದ್ಧ ವಿನಾಯಕ ಬಾಳಿಗರು ಸಮರ ಸಾರಿದ್ದೇ ಅವರ ಕೊಲೆಗೆ ಕಾರಣವಾಗಿದೆ. ಜೀರ್ಣೋದ್ಧಾರ ಸಂದರ್ಭ ಕೋಟಿಗಟ್ಟಲೆ ಹಣಕ್ಕೆ ದೇವಳದಲ್ಲಿ ಸರಿಯಾದ ಲೆಕ್ಕವಿಲ್ಲದಂತಾಗಿದೆ ಎಂದರು.
ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಮೂಲಕ ಹೋರಾಟ ತೀವ್ರಗೊಳಿಸಲಾಗುವುದು ಎಂದು ರಾಷ್ಟ್ರೀಯ ವಿಚಾರವಾದಿ ಸಂಘಟನೆಯ ಅಧ್ಯಕ್ಷ ನರೇಂದ್ರ ನಾಯಕ್ ಹೇಳಿದರು.
ಈ ಸಂದರ್ಭ ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್‌ನ ಸೋಮನಾಥ ನಾಯಕ್, ರೋಹನ್ ಸಿರಿ, ಪ್ರಮೋದ್ ಜಿ. ಕಾಮತ್, ಶಾಂತಾರಾಮ್ ಬಾಳಿಗಾ, ವೆಂಕಟೇಶ್ ಬಾಳಿಗಾ, ಆಶಾ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
1 ಕೋಟಿ ರೂ. ನಿಧಿ ಸಂಗ್ರಹಿಸಿ 50 ಲಕ್ಷ ರೂ. ಬಾಳಿಗಾರ ತಂದೆ-ತಾಯಿ ಹೆಸರಿನಲ್ಲಿ ನಿರಖು ಠೇವಣಿ ಇಟ್ಟು ಉಳಿದ 50 ಲಕ್ಷ ರೂ.ಗಳಲ್ಲಿ ಬಾಳಿಗಾರ ಹೋರಾಟವನ್ನು ಮುಂದುವರಿಸಲಾಗುವುದು
ರವೀಂದ್ರನಾಥ್ ಕಾಮತ್
ಹೈಕೋರ್ಟ್‌ನ ವಕೀಲರು
ವಿನಾಯಕ ಬಾಳಿಗಾ ಹೋರಾಟಕ್ಕೆ ನ್ಯಾಯ ಸಿಗುವವರೆಗೆ ಹೋರಾಟವನ್ನು ಮುಂದುವರಿಸುವುದೇ ಬಾಳಿಗಾ ಅರಿಗೆ ನಾವು ಸಲ್ಲಿಸುವ ಶ್ರದ್ಧಾಂಜಲಿ.
ನರೇಂದ್ರ ನಾಯಕ್
ರಾಷ್ಟ್ರೀಯ ವಿಚಾರವಾದಿ ಸಂಘಟನೆಯ ಅಧ್ಯಕ್ಷ
ದೇವಸ್ಥಾನದ ಲೆಕ್ಕಪತ್ರ ಅವ್ಯವಹಾರದ ವಿರುದ್ಧ ವಿನಾಯಕ ಬಾಳಿಗಾ ಅವರು ಸಮರ ಸಾರಿದ್ದೇ ಕೊಲೆಗೆ ಕಾರಣವಾಗಿದೆ
ಕೆ.ಪಿ. ವಾಸುದೇವ ರಾವ್
ವಕೀಲರು