×
Ad

ಮೆಹಬೂಬ ಸಂಪುಟಕ್ಕೆ ಸಜ್ಜಾದ್ ವಿದಾಯ?

Update: 2016-04-06 23:40 IST

 ಶ್ರೀನಗರ , ಎ.6: ಮಾಜಿ ಪ್ರತ್ಯೇಕತಾವಾದಿ , ಹಾಲಿ ಬಿಜೆಪಿ ರಾಜಕಾರಣಿ ಸಜ್ಜಾದ್ ಗನಿ ಲೋನ್ ನೂತನ ಪಿಡಿಪಿ - ಬಿಜೆಪಿ ಸರಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ರಾಜೀನಾಮೆ ನೀಡಿದ್ದಾರೆ . ಆದರೆ ಅವರ ರಾಜೀನಾಮೆ ಸ್ವೀಕರಿಸುವ ಕುರಿತು ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಅವರು ಈ ಬಗ್ಗೆ ಬಿಜೆಪಿಯ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದಾರೆ. ಮಾಜಿ ಪ್ರತ್ಯೇಕತಾವಾದಿ ನಾಯಕ ಅಬ್ದುಲ್ ಗನಿ ಲೋನ್ ಅವರ ಪುತ್ರ ಸಜ್ಜಾದ್ ಅವರು ತಮಗೆ ನೀಡಲಾದ ಸಾಮಾಜಿಕ ನ್ಯಾಯ ಹಾಗು ಆಡಳಿತ ಸುಧಾರಣೆ ಇಲಾಖೆಯ ಬಗ್ಗೆ ಅತೃಪ್ತಿಯಿಂದ ರಾಜೀನಾಮೆ ನೀಡಿದ್ದಾರೆಂದು ತಿಳಿದು ಬಂದಿದೆ. ಈ ಹಿಂದಿನ ಮುಫ್ತಿ ಮುಹಮ್ಮದ್ ಸಯೀದ್ ಅವರ ಸರಕಾರದಲ್ಲೂ ಪಶು ಸಂಗೋಪನೆ ಖಾತೆ ನೀಡಿದ್ದಾಗ ಅವರು ರಾಜೀನಾಮೆ ನೀಡಿದ್ದರು. ಬಳಿಕ ಅವರ ಮನವೊಲಿಸಲಾಗಿತ್ತು. ಲೋನ್ ಇದೀಗ ನೇರವಾಗಿ ದಿಲ್ಲಿಗೆ ತೆರಳಿದ್ದಾರೆ. ಅಲ್ಲಿ ಅವರು ಕಣ್ಣಿನ ಚಿಕಿತ್ಸೆ ಮಾಡಿಸಲು ಹೋಗಿದ್ದಾರೆ ಎಂದು ಅವರ ಆಪ್ತ ವಲಯ ತಿಳಿಸಿದೆ. ಆದರೆ ಅವರು ರಾಜಧಾನಿಯಲ್ಲಿ ಹಿರಿಯ ಬಿಜೆಪಿ ನಾಯಕರನ್ನು ಭೇಟಿಯಾಗುವ ಸಾಧ್ಯತೆ ಇಲ್ಲದಿಲ್ಲ.

..............


ಶ್ರೀನಗರ ಎನ್‌ಐಟಿಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ; ತರಗತಿ ಬಹಿಷ್ಕಾರ

ಶ್ರೀನಗರ, ಎ.6: ಇಲ್ಲಿನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಮಂಗಳವಾರ ವಿದ್ಯಾರ್ಥಿಗಳು ಪೊಲೀಸರೊಂದಿಗೆ ಘರ್ಷಣೆ ನಡೆಸಿದ ಬಳಿಕ, ಕೇಂದ್ರ ಸರಕಾರದ ಶಿಕ್ಷಣ ಸಚಿವಾಲಯದ ಇಬ್ಬರು ಸದಸ್ಯರ ತಂಡವೊಂದು ಅಲ್ಲಿಗೆ ತಲುಪಿದೆ, ಸಂಸ್ಥೆಯಲ್ಲೀಗ ಅರೆ ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ.
ಭಾರೀ ಸಂಖ್ಯೆಯಲ್ಲಿ ಪೊಲೀಸರು ಹಾಗೂ ಸಿಆರ್‌ಪಿಎಫ್ ಪಡೆಗಳು ನಿಯೋಜನೆಗೊಂಡಿರುವ ಶ್ರೀನಗರ ಎನ್‌ಐಟಿಯಲ್ಲಿ ಇಂದು ಮುಂಜಾನೆ ತರಗತಿಗಳು ನಡೆದಿವೆ. ಆದರೆ, ಪ್ರತಿಭಟನಾ ನಿರತ ಜಮ್ಮು-ಕಾಶ್ಮೀರದ ಹೊರಗಿನ ಹಲವು ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿದ್ದರು.
ವಿಶ್ವವಿದ್ಯಾನಿಲಯ ಮುಚ್ಚಗಡೆಯಿಂದ ತಮಗೆ ತೊಂದರೆಯಾಗಬಹುದೆಂದು ಸಂಶಯ ಪಡುತ್ತಿರುವ ವಿದ್ಯಾರ್ಥಿಗಳು, ತರಗತಿಗಳಿಗೆ ಅಡ್ಡಿಯಾಗುತ್ತಿರುವುದರಿಂದ ಸಂಕಷ್ಟಕ್ಕೊಳಗಾಗದಂತೆ ಕೇಂದ್ರೀಯ ಅಧಿಕಾರಿಗಳು ಖಚಿತಪಡಿಸಲಿರುವರೆಂದು ಜಮ್ಮು-ಕಾಶ್ಮೀರದವರೇ ಆಗಿರುವ ಪ್ರಧಾನಿ ಕಚೇರಿಯ ಸಹಾಯಕ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಟಿ-20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್‌ನೆದುರು ಭಾರತ ಸೋತ ಬಳಿಕ ಸ್ಥಳೀಯ ಹಾಗೂ ಜಮ್ಮು-ಕಾಶ್ಮೀರದ ಹೊರಗಿನ ವಿದ್ಯಾರ್ಥಿಗಳ ನಡುವೆ ಹೊಡೆದಾಟ ಸಂಭವಿಸಿದ್ದ ಕಾರಣ ಕಳೆದ ವಾರದಿಂದ ಕ್ಯಾಂಪಸ್‌ನಲ್ಲಿ ಉದ್ವಿಗ್ನತೆ ನೆಲೆಸಿತು. ಆ ವೇಳೆ ಸಂಸ್ಥೆಯು ತರಗತಿಗಳನ್ನು ಅಮಾನತುಗೊಳಿಸಿತ್ತು.
ಎ.11ಕ್ಕೆ ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಬೇಕೆಂಬ ವಿದ್ಯಾರ್ಥಿಗಳ ಬೇಡಿಕೆಯನ್ನು ಈಡೇರಿಸಲಾಗಿದೆ. ಎಲ್ಲವನ್ನೂ ನಿನ್ನೆ ಪರಿಹರಿಸಲಾಗಿದೆ. ಆದರೆ, ಸಂಜೆ ಪ್ರತಿಭಟನೆಗಳು ಹಾಗೂ ಘರ್ಷಣೆಗಳು ಪರಿಸ್ಥಿತಿಯನ್ನು ಬುಡಮೇಲು ಮಾಡಿದ್ದವು. ಈಗ ಎಲ್ಲವೂ ಸಹಜ ಸ್ಥಿತಿಯಲ್ಲಿದೆಯೆಂದು ಸಂಸ್ಥೆಯ ನಿರ್ದೇಶಕ ರಜತ್ ಗುಪ್ತಾ ಎನ್‌ಡಿಟಿವಿಗಿಂದು ತಿಳಿಸಿದ್ದಾರೆ.
ತಮ್ಮ ಭದ್ರತೆಯ ಬಗ್ಗೆ ಭೀತಿಯಿರುವುದರಿಂದ ಪರೀಕ್ಷೆಗಳನ್ನು ಮುಂದೂಡಬೇಕೆಂದು ಹೊರಗಿನ ವಿದ್ಯಾರ್ಥಿಗಳು ಆಗ್ರಹಿಸಿದ್ದರು. ಮಂಗಳವಾರ ಅವರು ಕ್ಯಾಂಪಸ್‌ನ ಹೊರಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಪ್ರಯತ್ನಿಸಿದರು. ಆದರೆ, ಅವರನ್ನು ಸಂಸ್ಥೆಯಿಂದ ಹೊರಗೆ ಹೋಗದಂತೆ ಪೊಲೀಸರು ತಡೆದರು.
ಸಂಸ್ಥೆಯ ಪ್ರಧಾನ ದ್ವಾರದ ಬಳಿ ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆಯಿತು. ಪೊಲೀಸರು ಲಾಠಿ ಚಾರ್ಜ್ ನಡೆಸಿದಾಗ ಹಲವು ವಿದ್ಯಾರ್ಥಿಗಳು ಗಾಯಗೊಂಡರು. ಸುಮಾರು 500 ಮಂದಿ ವಿದ್ಯಾರ್ಥಿಗಳು ಪೊಲೀಸರ ಮೇಲೆ ಕಲ್ಲುಗಳಿಂದ ದಾಳಿ ನಡೆಸಿದರೆಂದು ಪೊಲೀಸರು ಆರೋಪಿಸಿದ್ದಾರೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News