ತಂಝೀಲ್ ಹತ್ಯೆ ವೈಯಕ್ತಿಕ ದ್ವೇಷದ ಕೃತ್ಯ?
ಹೊಸದಿಲ್ಲಿ, ಎ.6: ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿ ತಂಝೀಲ್ ಅಹ್ಮದ್ ಅವರ ಹತ್ಯೆಯಲ್ಲಿ ಉಗ್ರರ ಅಥವಾ ರಾಜಕೀಯ ಕೈವಾಡ ಇದ್ದಂತಿಲ್ಲ. ವೈಯಕ್ತಿಕ ದ್ವೇಷದಿಂದ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಎನ್‌ಐಎ ಮೂಲಗಳು ಹೇಳಿವೆ.
ಹತ್ಯೆಗೀಡಾದ ಅಧಿಕಾರಿ ಭಾಗವಹಿಸಿದ್ದ ವಿವಾಹ ಸಮಾರಂಭದ ವೀಡಿಯೊದಲ್ಲಿ ಇಬ್ಬರು ಶಂಕಿತರನ್ನು ಗುರುತಿಸಿರುವುದಾಗಿ ಹೇಳಿಕೆ ನೀಡಿದ್ದ ಉತ್ತರ ಪ್ರದೇಶ ಪೊಲೀಸರು ಇದೀಗ ಆ ಸಾಧ್ಯತೆಯನ್ನು ನಿರಾಕರಿಸಿದ್ದಾರೆ.
ಮದುವೆ ಸಮಾರಂಭದ ವೀಡಿಯೊ ದೃಶ್ಯಾವಳಿಯನ್ನು ಪರಿಶೀಲಿಸಿದಾಗ, ಇಬ್ಬರು ಯುವಕರ ಮೇಲೆ ಅನುಮಾನ ಬಂದಿದ್ದು, ದಾಳಿಯ ಹಿಂದೆ ಅವರ ಕೈವಾಡವಿದೆ ಎಂಬ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದರು. ಅದರ ಆಧಾರದಲ್ಲಿ ಪ್ರಕರಣದ ಬಗ್ಗೆ ಮಹತ್ವದ ಸುಳಿವು ಸಿಕ್ಕುವ ಸಾಧ್ಯತೆ ಇದೆ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ. ಎನ್‌ಐಎ ಅಧಿಕಾರಿಯ ಮೇಲೆ ದಾಳಿ ಮಾಡಲು ಎರಡು ಅಸ್ತ್ರಗಳನ್ನು ಬಳಸಲಾಗಿದೆ. ಒಂದು 9 ಎಂಎಂ ಪಿಸ್ತೂಲು. ಇದನ್ನು ವಾಸ್ತವವಾಗಿ ನಿಷೇಧಿಸಲಾಗಿದೆ. ಇನ್ನೊಂದು ಎ. 32 ಪಿಸ್ತೂಲು ಎಂದು ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ಜಾವೆದ್ ಅಹ್ಮದ್ ಹೇಳಿದ್ದಾರೆ.
ಈ ಹಿಂದೆ ಗಡಿದ್ರತಾ ಪಡೆಯಲ್ಲಿ ಸಹಾಯಕ ಕಮಾಂಡೆಂಟ್ ಆಗಿದ್ದ ಅಹ್ಮದ್ ಅವರನ್ನು, ನಿಯೋಜನೆ ಮೇರೆಗೆ ಎನ್‌ಐಎಗೆ ವರ್ಗಾಯಿಸಲಾಗಿತ್ತು. ಅವರು ಸಂಬಂಧಿಕರ ವಿವಾಹ ಸಮಾರಂಭ ಮುಗಿಸಿ ತಮ್ಮ ಕುಟುಂಬದ ಜತೆಗೆ ಬಿಜನೋರ್ ಜಿಲ್ಲೆಯ ಸಹಾಸ್‌ಪುರ ಗ್ರಾಮಕ್ಕೆ ಬರುತ್ತಿದ್ದಾಗ ಅವರ ಮೇಲೆ ದಾಳಿ ನಡೆದಿತ್ತು.