×
Ad

ಉತ್ತರಾಖಂಡ: ರಾವತ್ ಅರ್ಜಿ ಮುಂದೂಡಿಕೆಗೆ ಹೈ ನಕಾರ

Update: 2016-04-06 23:42 IST

ನೈನಿತಾಲ್, ಎ.6: ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿರುವ ಕೇಂದ್ರದ ಕ್ರಮವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಹರೀಶ್ ರಾವತ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಮುಂದೂಡುವಂತೆ ಕೋರಿ ಕೇಂದ್ರ ಸರಕಾರ ಸಲ್ಲಿಸಿದ ಮನವಿಯನ್ನು ಉತ್ತರಾಖಂಡ ಹೈಕೋರ್ಟ್ ಬುಧವಾರ ತಿರಸ್ಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಹಾಗೂ ನ್ಯಾಯಮೂರ್ತಿ ವಿ.ಕೆ.ಬಿಷಾತ್ ಅವರನ್ನೊಳಗೊಂಡ ನ್ಯಾಯಪೀಠ, ಕೇಂದ್ರ ಸರಕಾರವನ್ನು ಪ್ರತಿನಿಧಿಯ ಇಬ್ಬರು ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರ ವಾದವನ್ನು ತಳ್ಳಿಹಾಕಿತು. ರಾವತ್ ಸಲ್ಲಿಸಿರುವ ಅರ್ಜಿ ಸಂಪೂರ್ಣ ಹೊಸ ಪ್ರಕರಣವಾಗಿರುವುದರಿಂದ ವಿಚಾರಣೆ ಮುಂದೂಡಬೇಕು ಎಂದು ಎಎಸ್‌ಜಿಗಳು ವಾದ ಮಂಡಿಸಿದ್ದರು. ಉತ್ತರಾಖಂಡ ವಿಧಾನಸಭೆ ಆಂಗೀಕರಿಸಿದೆ ಎನ್ನಲಾದ ಹಣಕಾಸು ಮಸೂದೆ ಸಂಪೂರ್ಣ ಹೊಸ ಅಂಕಿ ಅಂಶಗಳನ್ನು ಒಳಗೊಂಡಿದ್ದು, ಈ ಪ್ರಕರಣದ ಹಿನ್ನೆಲೆಯಲ್ಲಿ ಅವುಗಳನ್ನು ಪುನರ್ ಪರಿಶೀಲಿಸಿಬೇಕಿದೆ ಎಂಬ ಕಾರಣ ನೀಡಿ ಎಎಸ್‌ಜಿಗಳಾದ ತುಷಾರ್ ಮೆಹ್ತಾ ಹಾಗೂ ಮಣಿಂದರ್ ಸಿಂಗ್ ಅವರು ಅರ್ಜಿ ಮುಂದೂಡಿಕೆಗೆ ಆಗ್ರಹಿಸಿದರು.

ವಿಚಾರಣೆ ಮುಂದೂಡುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಆಕ್ಷೇಪ ಸಲ್ಲಿಸಬೇಕಾದರೆ, ಇಂದು ಅಥವಾ ನಾಳೆ ಸಲ್ಲಿಸಿ ಎಂದು ಹೈಕೋರ್ಟ್ ತಾಕೀತು ಮಾಡಿತು. ಕೇಂದ್ರ ತನ್ನ ಪ್ರತಿಕ್ರಿಯೆ ನೀಡುವವರೆಗೆ ಆ ಅಂಶವನ್ನು ಪರಿಶೀಲಿಸುವುದಿಲ್ಲ ಎಂದು ಭರವಸೆ ನೀಡಿತು. ಅದಾಗ್ಯೂ ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠ ಮುಂದುವರಿಸಿತು.
 ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಪದಚ್ಯುತ ಮುಖ್ಯಮಂತ್ರಿಯ ಪರವಾಗಿ ವಾದ ಮಂಡಿಸಿ, ಹಣಕಾಸು ಮಸೂದೆ ಸಂಬಂಧ ತನ್ನ ಪ್ರತಿಕ್ರಿಯೆ ಸಲ್ಲಿಸಲು ಅವಕಾಶ ಕೋರಿ ಈ ಪ್ರಕರಣವನ್ನು ಮುಂದೂಡಲು ಕೇಂದ್ರ ಸರಕಾರ ಪ್ರಯತ್ನ ನಡೆಸುತ್ತಿರುವುದು ಆಕ್ಷೇಪಾರ್ಹ ಎಂದು ಹೇಳಿದರು.
ಈ ಹಣಕಾಸು ಮಸೂದೆಯು ರಾಜ್ಯ ಸರಕಾರದ ವಾರ್ಷಿಕ ಬಜೆಟ್ ಅಂಶಗಳನ್ನು ಒಳಗೊಂಡಿದ್ದು, ಅದನ್ನು ವಿಧಾನಸಭೆ ಆಂಗೀಕರಿಸಿದ್ದಾಗಿ ಸರಕಾರ ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News