ವೀರಭದ್ರ ಸಿಂಗ್‌ರ ಮಕ್ಕಳಿಗೆ ಪರಿಹಾರ ನೀಡಲು ಹೈಕೋರ್ಟ್ ನಕಾರ
ಹೊಸದಿಲ್ಲಿ, ಎ.6: ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ವೀರಭದ್ರ ಸಿಂಗರ ಇಬ್ಬರು ಮಕ್ಕಳಿಗೆ ಯಾವುದೇ ಮಧ್ಯಾಂತರ ರಕ್ಷಣೆಯನ್ನು ನೀಡಲು ದಿಲ್ಲಿ ಹೈಕೋರ್ಟ್‌ಬುಧವಾರ ನಿರಾಕರಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ ತಮ್ಮ ಕೆಲವು ಆಸ್ತಿಗಳನ್ನು ಜಾರಿ ನಿರ್ದೇಶನಾಲಯವು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿರುವುದನ್ನು ಸಿಂಗ್‌ರ ಮಕ್ಕಳು ಪ್ರಶ್ನಿಸಿದ್ದರು.
ಜಾರಿ ನಿರ್ದೇಶನಾಲಯ(ಇ.ಡಿ) ಹಾಗೂ ಹಣಕಾಸು ಸಚಿವಾಲಯಗಳಿಗೆ ಉತ್ತರ ದಾಖಲಿಸಲು ಅವಕಾಶವೊಂದನ್ನು ನೀಡುತ್ತೇವೆ. ಬಳಿಕ ತಾವು ಅವರಿಗೆ ಯಾವುದೇ ರೀತಿಯ ರಕ್ಷಣೆ ನೀಡಬೇಕಾದ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸುತ್ತೇವೆಂದು ಮುಖ್ಯನ್ಯಾಯಮೂರ್ತಿ ಜಿ.ರೋಹಿಣಿ ಹಾಗೂ ನ್ಯಾಯಮೂರ್ತಿ ಜಯಂತನಾಥರಿದ್ದ ಪೀಠವೊಂದು ಹೇಳಿತು.
ಇದೇ ವೇಳೆ, ವೀರಭದ್ರ ಸಿಂಗರ ಪುತ್ರಿ ಅಪರಾಜಿತಾ ಕುಮಾರಿ ಹಾಗೂ ಪುತ್ರ ವಿಕ್ರಮಾದಿತ್ಯ ಸಿಂಗ್ ಎಂಬವರು ಸಲ್ಲಿಸಿರುವ ಮನವಿಗೆ ಪ್ರತಿಕ್ರಿಯೆ ಕೀಳಿ ಇ.ಡಿ ಹಾಗೂ ಕೇಂದ್ರ ಸರಕಾರಗಳಿಗೆ ಅದು ನೋಟಿಸ್‌ಗಳನ್ನು ಕಳುಹಿಸಿತು.
ಜಾರಿ ನಿರ್ದೇಶನಾಲಯದ ಮಾ.23ರ ತಾತ್ಕಾಲಿಕ ಮುಟ್ಟುಗೋಲು ಆದೇಶವು ‘ಅದರ ನ್ಯಾಯಾಂಗ ವ್ಯಾಪ್ತಿಯನ್ನು ಮೀರಿದುದಾಗಿದೆ’ ಆದುದರಿಂದ ಅದನ್ನು ರದ್ದುಗೊಳಿಸಬೇಕೆಂದೂ ಅವರಿಬ್ಬರು ಕೋರಿದ್ದರು.