ಬಜೆಟ್ ಅಧಿವೇಶನದ ಉತ್ತರಾರ್ಧ ಎಪ್ರಿಲ್ 25ರಂದು ಆರಂಭ
Update: 2016-04-06 23:49 IST
ಹೊಸದಿಲ್ಲಿ, ಎ.6: ಸಂಸತ್ತಿನ ಬಜೆಟ್ ಅಧಿವೇಶನದ ಎರಡನೆ ಭಾಗ ಎಪ್ರಿಲ್ 25ರಂದು ಆರಂಭವಾಗಲಿದ್ದು, ಮೇ 13ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಕೇಂದ್ರ ಸರಕಾರ ವಿರೋಧ ಪಕ್ಷಗಳ ಬೆಂಬಲದೊಂದಿಗೆ ಜಿಎಸ್‌ಟಿ ಮಸೂದೆ ಸೇರಿದಂತೆ ಮಹತ್ವದ ಹಲವು ಶಾಸನಗಳನ್ನು ಆಂಗೀಕರಿಸಲಿದೆ ಎಂದು ಹೇಳಲಾಗಿದೆ.
ಅಧಿವೇಶನದ ಎರಡನೆ ಭಾಗ ಏಪ್ರಿಲ್ 25ರಂದು ಆರಂಭವಾಗಲಿದೆ. ಎರಡನೆ ಭಾಗದ ಕಲಾಪ ನಡೆಸುವುದೇ ಇಲ್ಲ ಎಂಬ ವದಂತಿಗಳು ಇದ್ದವು. ಈ ಬಗ್ಗೆ ತಿಳಿದುಕೊಳ್ಳದೇ ಕೆಲವರು ಟೀಕಿಸಲು ಕೂಡಾ ಆರಂಭಿಸಿದ್ದರು. ಉತ್ತರಾಖಂಡದಲ್ಲಿ ಸಂವಿಧಾನಾತ್ಮಕ ಬಿಕ್ಕಟ್ಟು ತಲೆದೋರಿದ ಹಿನ್ನೆಲೆಯಲ್ಲಿ ನಾವು ಅಲ್ಲಿನ ಹಣಕಾಸು ಮಸೂದೆ ಬಗ್ಗೆ ಕಾಳಜಿ ವಹಿಸಬೇಕಿತ್ತು. ಇದರಿಂದ ಅಧಿವೇಶನ ವಿಳಂಬವಾಗಿದೆ ಎಂದು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಂ.ವೆಂಕಯ್ಯ ನಾಯ್ಡು ಪತ್ರಕರ್ತರಿಗೆ ತಿಳಿಸಿದರು.