ಪುತ್ತೂರು: ಕಾಂಗ್ರೆಸ್ ವಿಜಯೋತ್ಸವ: ಪಟಾಕಿ ಸಿಡಿಸಿ ಸಂಭ್ರಮ
ಪುತ್ತೂರು: ನಗರಸಭೆ 27 ಸ್ಥಾನಗಳಲ್ಲಿ 15 ಕಾಂಗ್ರೆಸ್ ಪಾಲಾಗಿತ್ತು. ಆದರೂ ಬಿಜೆಪಿಗರ ತಂತ್ರದಿಂದಾಗಿ ಬಹುಮತ ಕಳೆದುಕೊಳ್ಳುವಂತಾಯಿತು. ಇದೀಗ ಕಾಂಗ್ರೆಸ್‌ಗೆ ಗೆಲುವು ಸಿಕ್ಕಿದೆ. ಮುಂದಿನ ಎರಡೂವರೆ ವರ್ಷದಲ್ಲಿ ಜನರ ನಿರೀಕ್ಷೆಯಂತೆ ಕೆಲಸ ಮಾಡಲಾಗುವದು ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹೇಳಿದರು.
ಅವರು ನಗರಸಭೆ ಚುನಾವಣೆ ಬಳಿಕ ನಗರಸಭೆ ಆವರಣದಲ್ಲಿ ನಡೆದ ವಿಜಯೋತ್ಸವದಲ್ಲಿ ಮಾತನಾಡಿದರು. ಬಿಜೆಪಿಯ ಕುಮ್ಮಕ್ಕಿನಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತ್ತು. ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆಡಳಿತ ದೋಷ ಪರಿಹಾರಕ್ಕೆ ಪ್ರಯತ್ನಿಸಲಾಗುವುದು. ಅಭಿವೃದ್ಧಿ ಕಡೆ ಹೆಚ್ಚಿನ ಮುತುವರ್ಜಿ ವಹಿಸಲಾಗುವುದು. ಬಿಜೆಪಿಗರು ರಾಜ್ಯದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಎಸಿಬಿ ರದ್ದು ಮಾಡುವಂತೆ ಬಿಜೆಪಿಗರು ರಸ್ತೆಗಿಳಿದು ಬೊಬ್ಬೆ ಹೊಡೆಯುತ್ತಾರೆ. ಆದರೆ ನಗರಸಭೆಯ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ಆದರೆ ಇನ್ನು ಮುಂದೆ ಪುತ್ತೂರು ನಗರಸಭೆಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ ಎಂದರು.
ನೈತಿಕತೆ ಆಧಾರದಲ್ಲಿ ಉಪಾಧ್ಯಕ್ಷ ಸ್ಥಾನ ಬಿಟ್ಟುಕೊಡುವಂತೆ ಕೇಳಿಕೊಂಡಿದ್ದೆವು. ಆದರೆ ಬಿಜೆಪಿಗರು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರು. ಇದೀಗ ಅವರಿಗೆ ವಿಪಕ್ಷ ಸ್ಥಾನವೂ ಇಲ್ಲ ಎಂಬಂತಾಗಿದೆ. ಒಂದರ್ಥದಲ್ಲಿ ಗತಿಯೂ ಇಲ್ಲ, ಮತಿಯೂ ಇಲ್ಲ ಎಂದು ಲೇವಡಿ ಮಾಡಿದರು.
ನಗರಸಭೆ ಸದಸ್ಯ ಮಹಮ್ಮದಾಲಿ ಮಾತನಾಡಿ ಪಕ್ಷದ ಅಣತಿಯಂತೆ ಅಧ್ಯಕ್ಷತೆ ಸ್ಪರ್ಧಿಸಿದಾಗ ಎರಡು ಬಾರಿ ತನ್ನನ್ನು ಸೋಲಿಸುವ ಪ್ರಯತ್ನ ನಡೆದಿದೆ. ಇದೀಗ ಬಿಜೆಪಿಗೆ ನೈತಿಕತೆ ಇಲ್ಲದಾಗಿದೆ. ಅಧಿಕಾರ ತಪ್ಪಿಸಿ ಅವರು ನೈತಿಕತೆ ಕಳೆದುಕೊಂಡಿದ್ದಾರೆ. ಅಧಿಕಾರ ಹಿಡಿದು ಅಭಿವೃದ್ಧಿಗಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಹೈಕೋರ್ಟ್‌ನಲ್ಲಿ ಕಾಂಗ್ರೆಸ್‌ಗೆ ಜಯ ಸಿಕ್ಕಿದೆ. ನಗರಸಭೆ ಅಧ್ಯಕ್ಷ ಸ್ಥಾನವೂ ಸಿಕ್ಕಿದೆ. ಮುಂದಿನ ಅವಧಿಯಲ್ಲಿ ಅಭಿವೃದ್ಧಿಯಲ್ಲಿ ರಾಜಕೀಯ ಮಾಡುವುದಿಲ್ಲ. 8 ಜನ ಸದಸ್ಯರನ್ನು ಜತೆಗೂಡಿಸಿ ಉತ್ತಮ ಆಡಳಿತ ನೀಡುತ್ತೇವೆ ಎಂದರು.
ಕಾಂಗ್ರೆಸ್ ಮುಖಂಡರಾದ ಲೊಕೇಶ್ ಹೆಗ್ಡೆ, ರವಿಪ್ರಸಾದ್ ಶೆಟ್ಟಿ, ವಿಶ್ವನಾಥ ನಾಕ್, ಅನಿತಾ ಹೇಮನಾಥ ಶೆಟ್ಟಿ, ಅನ್ವರ್ ಕಾಸಿಂ, ಸ್ವರ್ಣಲತಾ, ಜೆಸಿಂತಾ ಮಸ್ಕರೇನಸ್, ಶಕ್ತಿಸಿನ್ಹಾ ಮೊದಲಾದವರು ಉಪಸ್ಥಿತರಿದ್ದರು.