ಸಾಲ ಮರುಪಾವತಿಸದ ಕೇಂದ್ರ ಸಚಿವ ವೈ.ಎಸ್.ಚೌಧುರಿಗೆ ಬೇಜಾಮೀನು ವಾರಂಟ್
ಹೈದರಾಬಾದ್, ಎ. 7: ಸಾಲ ಮರುಪಾವತಿಸದ ಪ್ರಕರಣಕ್ಕೆ ಸಂಬಂಧಿಸಿ ಹೈದರಾಬಾದ್‌ನ ನ್ಯಾಯಾಲಯವೊಂದು ಕೇಂದ್ರ ಸಚಿವ ವೈ.ಎಸ್.ಚೌಧುರಿ ಅವರಿಗೆ ಜಾಮೀನುರಹಿತ ವಾರಂಟ್ ಜಾರಿಗೊಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಚೌಧುರಿ, ಸಾರ್ವಜನಿಕ ಹಿತಾಸಕ್ತಿಯ ಕರ್ತವ್ಯಗಳನ್ನು ನಿರ್ವಹಿಸಬೇಕಾದ ಹಿನ್ನೆಲೆಯಲ್ಲಿ ತನಗೆ ಈ ಮೊದಲು ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲವೆಂದಜು ಸಮಜಾಯಿಷಿ ನೀಡಿದ್ದಾರೆ.
‘‘ಹೈದರಾಬಾದ್ ನ್ಯಾಯಾಲಯವು ನನ್ನ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿಗೊಳಿಸಿರುವುದು ನನಗೆ ಈಗಷ್ಟೇ ತಿಳಿಯಿತು. ಸಾರ್ವಜನಿಕ ಹಿತಾಸಕ್ತಿಯ ಕರ್ತವ್ಯಗಳ ನಿರ್ವಹಣೆಯ ಒತ್ತಡದಿಂದಾಗಿ ನನಗೆ ಈ ಮೊದಲು ನಿಗದಿಪಡಿಸಲಾದ ದಿನಾಂಕಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ನ್ಯಾಯಾಂಗದ ಬಗ್ಗೆ ತನಗೆ ಅಪಾರ ಗೌರವವಿದ್ದು, ಕೋರ್ಟ್‌ಗೆ ಹಾಜರಾಗುವುದನ್ನು ತಪ್ಪಿಸಿಕೊಳ್ಳುವ ಉದ್ದೇಶ ನನಗಿರಲಿಲ್ಲ. ನ್ಯಾಯಾಲಯದ ಆದೇಶಕ್ಕೆ ಬದ್ಧವಾಗಿ ನಡೆದುಕೊಳ್ಳುತ್ತೇನೆ’’ ಎಂದವರು ಹೇಳಿದ್ದಾರೆ.
ತೆಲುಗುದೇಶಂ ಪಕ್ಷದ ನಾಯಕರಾದ ವೈ.ಎಸ್.ಚೌಧುರಿ ರಾಜ್ಯಸಭಾ ಸದಸ್ಯರು. ಅವರು ಮೋದಿ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂವಿಜ್ಞಾನ ಖಾತೆಯ ಸಹಾಯಕ ಸಚಿವರಾಗಿದ್ದಾರೆ.