ನಿರ್ದಯವಾಗಿ ನಾಲ್ಕು ಸಿಕ್ಸ್ ಚಚ್ಚಿದ ಬ್ರಾತ್ ವೇಟ್ ನ ಹೃದಯ ವೈಶಾಲ್ಯ ನೋಡಿ

Update: 2016-04-09 04:29 GMT

ಹೊಸದಿಲ್ಲಿ , ಎ.7: ಟಿ20 ವಿಶ್ವಕಪ್ ಫೈನಲ್ ಬಳಿಕ ವೆಸ್ಟ್ ಇಂಡೀಸ್ ನ ಕಾರ್ಲೋಸ್ ಬ್ರಾತ್ ವೇಟ್ ತನ್ನ ದೇಶದ ಪಾಲಿಗೆ ಹೀರೋ ಆಗಿದ್ದರೆ ಕೊನೆಯ ಓವರ್ ನಲ್ಲಿ ಸತತ ನಾಲ್ಕು ಸಿಕ್ಸ್ ಬಿಟ್ಟು ಕೊಟ್ಟ  ಇಂಗ್ಲಂಡ್ ಬೌಲರ್ ಬೆನ್ ಸ್ಟೋಕ್ಸ್ ಸ್ವಾಭಾವಿಕವಾಗಿಯೇ ಹಲವರ ಪಾಲಿಗೆ ವಿಲನ್ ಆಗಿದ್ದಾರೆ. ಆದರೆ ಅವರನ್ನು ದ್ವೇಷಿಸುವವರು , ಹೀಯಾಳಿಸುವವರು ಕೇವಲ ಇಂಗ್ಲಂಡ್ ಗೆ ಮಾತ್ರ ಸೀಮಿತವಾಗಿಲ್ಲ. ಅವರ ಜನ್ಮ ಸ್ಥಳ ನ್ಯೂಜ್ಹಿಲ್ಯಾಂಡ್ ನಲ್ಲೂ ಅವರಿಗೆ ಅಪಹಾಸ್ಯ ಎದುರಿಸಬೇಕಾಗಿ ಬಂದಿದೆ. ಸ್ಟೋಕ್ಸ್ ಬಾಲ್ಯದಲ್ಲೇ ನ್ಯೂಜ್ಹಿಲ್ಯಾಂಡ್ ನ ಕ್ರೈಸ್ಟ್ ಚರ್ಚ್ ನಿಂದ ಇಂಗ್ಲಂಡ್ ಗೆ ವಲಸೆ ಬಂದವರು.

ಟಿ೨೦ ವಿಶ್ವಕಪ್ ಫೈನಲ್ ಬಳಿಕ ನ್ಯೂಜ್ಹಿಲ್ಯಾಂಡ್ ರೇಡಿಯೋ ಸ್ಟೇಶನ್ ಒಂದರ ಇಬ್ಬರು ಜಾಕಿಗಳು ಸ್ಟೋಕ್ಸ್ ರನ್ನು ಕಾರ್ಯಕ್ರಮದಲ್ಲಿ ಹೀಯಾಳಿಸಿದರು. ಇದು ನ್ಯೂಜ್ಹಿಲ್ಯಾಂಡ್ ನಲ್ಲೇ ಇರುವ ಸ್ಟೋಕ್ಸ್ ಅವರ ತಾಯಿ ದೆಬೋರ ಅವರನ್ನು ಕೆರಳಿಸಿದೆ. ಈ ಬಗ್ಗೆ ದೂರು ನೀಡಲು ರೇಡಿಯೋ ಸ್ಟೇಶನ್ ಗೆ ಕಾಲ್ ಮಾಡಿದಾಗ ಅವರು ಮಾತನಾಡಿದ್ದನ್ನು ಸ್ಟೇಶನ್ ನವರು ನೇರವಾಗಿ ಕೇಳುಗರಿಗೆ ಪ್ರಸಾರ ಮಾಡಿಬಿಟ್ಟಿದ್ದಾರೆ. ಇದರಿಂದ ಅವಮಾನಿತರಾದ ದೆಬೋರ ಸ್ಟೇಶನ್ ಮಾಲಕರಿಗೆ ದೂರು ನೀಡಿದ್ದಾರೆ. ತಕ್ಷಣ ಜಾಕಿಗಳನ್ನು ದಿನದ ಮಟ್ಟಿಗೆ ಅಮಾನತು ಮಾಡಲಾಗಿದೆ. 

ಆಗ ರಂಗ ಪ್ರವೇಶ ಮಾಡಿದವರು ಫೈನಲ್ ಪಂದ್ಯದ ಹೀರೋ ಕಾರ್ಲೋಸ್ ಬ್ರಾತ್ ವೇಟ್. 

ಬಿಬಿಸಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬ್ರಾತ್ ವೇಟ್ " ನನಗೆ ಆಕೆಯ ಬಗ್ಗೆ ಕನಿಕರವಿದೆ. ಆಕೆ ಯಾವತ್ತೂ ತನ್ನ ತಲೆ ಎತ್ತಿ ನಿಲ್ಲಬೇಕು, ಆಕೆಯ ಪುತ್ರ ಈಗಲೂ , ಮುಂದೆಯೂ ಅತ್ಯುತ್ತಮ ಆಟಗಾರ. ಆಕೆಗೆ ಇಡೀ ವೆಸ್ಟ್ ಇಂಡೀಸ್ ಹಾಗು ಭಾರತದಿಂದ ಬೆಂಬಲವಿದೆ ಎಂದು ನಾನು ಹೇಳಬಯಸುತ್ತೇನೆ. ನಿಜವಾಗಿ ನಾನು ಬೆನ್ ಜೊತೆ ಮಾತನಾಡಿದೆ. ನಮಗಿಬ್ಬರಿಗೂ ಪರಸ್ಪರರ ಮೇಲೆ ಯಾವುದೇ ದ್ವೇಷವಿಲ್ಲ. ಬೆನ್ ಅವರ ತಾಯಿ ಹೆಮ್ಮೆಯಿಂದ ನೆನಪಿಸುವಂತಹ ಹಲವು ಸಾಧನೆಗಳನ್ನು ಬೆನ್ ಮಾಡಲಿದ್ದಾರೆ. ಜನರೂ ಆ ಒಂದು ಪ್ರದರ್ಶನದ ಆಧಾರದಲ್ಲಿ ಬೆನ್ ಅವರ ಪ್ರತಿಭೆಯನ್ನು ಅಳೆಯಬಾರದು. ಅವರು ಮುಂದೊಂದು ದಿನ ಅತ್ಯುತ್ತಮ ಆಲ್ ರೌಂಡರ್ ಆಗಲಿದ್ದಾರೆ " ಎಂದು ಹೇಳಿದ್ದಾರೆ. 

ಇದಲ್ಲವೇ ನಿಜವಾದ ಹೀರೋನ ಗುಣ ? ವೆಸ್ಟ್ ಇಂಡೀಸ್ ಗೆ ವಿಶ್ವಕಪ್ ಗೆದ್ದು ಕೊಟ್ಟ ಬ್ರಾತ್ ವೇಟ್ ತಮ್ಮ ಸಾಂತ್ವನದ ಮಾತುಗಳ ಮೂಲಕ ಜಗತ್ತಿನ ಮನಸ್ಸನ್ನೂ ಗೆದ್ದುಬಿಟ್ಟರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News