ಚಟುಕು ಸುದ್ದಿಗಳು
ಇಂದಿನಿಂದ ತ್ರಿದಿನ ರಂಗೋತ್ಸವ
ಉಡುಪಿ, ಎ.7: ಕೊಡವೂರಿನ ನವಸುಮ ರಂಗಮಂಚದ ವತಿಯಿಂದ ತ್ರಿದಿನ ರಂಗೋತ್ಸವ ಎ.8ರಿಂದ 10ರವರೆಗೆ ಮೂಡುಬೆಟ್ಟು ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.
ನಾಟಕೋತ್ಸವವನ್ನು ಎ.8ರಂದು ಸಂಜೆ ಉಡುಪಿ ಯಕ್ಷಗಾನ ಕೇಂದ್ರದ ನಿರ್ದೇಶಕ ಬನ್ನಂಜೆ ಸಂಜೀವ ಸುವರ್ಣ ಉದ್ಘಾಟಿಸಲಿದ್ದಾರೆ. ಉಡುಪಿ ಸಂಗೀತ ಸಭಾದ ಅಧ್ಯಕ್ಷ ಟಿ.ರಂಗ ಪೈ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಉಡುಪಿಯ ಅಮಾಸ ಕಲಾತಂಡದಿಂದ ತುಳು ನಾಟಕ ‘ಮಾರಿ ಗಿಡೆಪ್ಪುಲೆ’, ಎ.9ರಂದು ವನಸುಮ ವೇದಿಕೆ ಕಟ್ಪಾಡಿ ತಂಡದಿಂದ ‘ದಗಲ್ಬಾಜಿಲು’ ಹಾಗೂ ಎ.10ರಂದು ನಾಟ್ಕ ಮುದ್ರಾಡಿ ಇವರಿಂದ ‘ಮೂರು ಹೆಜ್ಜೆ ಮೂರು ಲೋಕ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟನೆ ತಿಳಿದೆ.
ಎ.15: ಮುಚ್ಚೂರು ಗ್ರಾಮಸಭೆ
ಮಂಗಳೂರು, ಎ.7: ಮಂಗಳೂರು ತಾಲೂಕು ಮುಚ್ಚೂರು ಗ್ರಾಪಂ 2015-16ನೆ ಸಾಲಿನ ದ್ವಿತೀಯ ಹಂತದ ವಾರ್ಡು ಸಭೆಯು ಎ.11ರಂದು ಬೆಳಗ್ಗೆ 10:30ಕ್ಕೆ ಪಂಚಾಯತ್ ಸಭಾಭವನ ಮುಚ್ಚೂರು, ಎ.12ರಂದು ನೆಲ್ಲಿಗುಡ್ಡೆ ಅಂಗನವಾಡಿ ಕೇಂದ್ರ ಹಾಗೂ ಗ್ರಾಮ ಸಭೆಯನ್ನು ಎ.15ರಂದು ಪೂರ್ವಾಹ್ನ 11ಕ್ಕೆ ಮುಚ್ಚೂರು ಗ್ರಾಪಂ ಸಭಾಭವನದಲ್ಲಿ ನಡೆಸುವುದಾಗಿ ಪ್ರಕಟನೆ ತಿಳಿಸಿದೆ.
ಜುಬೈಲ್: ಎ.28ರಂದು ಕುಟುಂಬ ಸಮ್ಮಿಲನ
ಜುಬೈಲ್, ಎ.7: ಜೋಕಟ್ಟೆಯ ಅನಿವಾಸಿ ಒಕ್ಕೂಟವಾದ ಜೋಕಟ್ಟೆ ಏರಿಯಾ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಷನ್(ಜೆಎಎಂಡಬ್ಲುಎ) ವತಿಯಿಂದ ‘ಸಮುದಾಯಿಕ ಅಭ್ಯುದಯಕ್ಕಾಗಿ ಒಟ್ಟು ಸೇರೋಣ’ ಎಂಬ ಧ್ಯೇಯವಾಕ್ಯದಡಿ ‘ಗಮ್ಮತ್ತ್ -2016’ ಕುಟುಂಬ ಸಮ್ಮಿಲನ ಎ.28ರಂದು ಜುಬೈಲ್ನ ಪೆಟ್ರೋ ಕೆಮ್ಯಾ ಬೀಚ್ ಕ್ಯಾಂಪ್‌ನಲ್ಲಿ ನಡೆಯಲಿದೆ.
ಅಲ್ ಮುಝೈನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಝಕರಿಯಾ ಜೋಕಟ್ಟೆ ಮಾರ್ಗದರ್ಶನದಲ್ಲಿ ಸಮಾರಂಭ ನಡೆಯಲಿದ್ದು, ಕಾರ್ಯ ನಿರ್ವಹಣೆಗಾಗಿ ಉಪ ಸಮಿತಿಯನ್ನು ರಚಿಸಲಾಗಿದೆ. ದಮ್ಮಾಮ್, ಜುಬೈಲ್, ರಿಯಾದ್ ಹಾಗೂ ಜಿದ್ದಾದ ಸದಸ್ಯರ ಉಪಸ್ಥಿತಿಯೊಂದಿಗೆ ಕಾರ್ಯಕ್ರಮದ ಕರಪತ್ರ ಹಾಗೂ ಪ್ರಥಮ ಕೂಪನ್ ಬಿಡುಗಡೆ ಮಾಡಲಾಗಿದೆ ಎಂದು ಜೆಎಎಂಡಬ್ಲುಎ ಗೌರವಾಧ್ಯಕ್ಷ ಝಕರಿಯ ಜೋಕಟ್ಟೆ ಅಲ್-ಮುಝೈನ್, ದಮ್ಮಾಮ್ ಹಾಗೂ ಜುಬೈಲ್ ಘಟಕದ ಅಧ್ಯಕ್ಷ ಅಬ್ದುರ್ರಹ್ಮಾನ್ ಅಹ್ಮದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅಂಧ ವ್ಯಕ್ತಿಗೆ ಬೆದರಿಕೆ: ಖಂಡನೆ
ಉಡುಪಿ, ಎ.7: ಮಾಹಿತಿ ಹಕ್ಕು ಕಾಯ್ದೆಯಡಿ ಅಂಗವಿಕಲರಿಗೆ ಗ್ರಾಪಂನಿಂದ ಸಿಗುವ ವಿವಿಧ ಸೌಲಭ್ಯ ಹಾಗೂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಅಮಾಸೆಬೈಲು ಗ್ರಾಪಂನಿಂದ ಮಾಹಿತಿ ಕೇಳಿದ ವಿಕಲಚೇತನ ಹಾಗೂ ಅಂಧ ಗಣಪತಿ ಪೂಜಾರಿಗೆ ಗ್ರಾಪಂ ಅಧ್ಯಕ್ಷೆ ಹಾಗೂ ಇಬ್ಬರು ಸದಸ್ಯರೊಂದಿಗೆ ಪಿಡಿಒ ಬೆದರಿಕೆ ಒಡ್ಡಿರುವುದನ್ನು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ತೀವ್ರವಾಗಿ ಖಂಡಿಸಿದೆ.
ಪಿಡಿಒರನ್ನು ಅಮಾನತು ಮಾಡಬೇಕು ಹಾಗೂ ಗ್ರಾಪಂ ಅಧ್ಯಕ್ಷೆ ಮತ್ತು ಸದಸ್ಯರು ರಾಜೀನಾಮೆ ಕೊಡಬೇಕು ಎಂದು ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ಗೌರವಾಧ್ಯಕ್ಷ ವೆಂಕಟೇಶ ಕೋಣಿ ಒತ್ತಾಯಿಸಿದ್ದಾರೆ.
ಪುತ್ತೂರು: ಇಂದಿನಿಂದ ಸೌಹಾರ್ದ ರೋಲಿಂಗ್ ಟ್ರೋಫಿ ಕ್ರಿಕೆಟ್
ಪುತ್ತೂರು, ಎ.7: ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಎ.8ರಂದು 6ನೆ ವರ್ಷದ ‘ಅಮರ್ ಅಕ್ಬರ್ ಅಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿ- 2016’ ಕ್ರಿಕೆಟ್ ಪಂದ್ಯಾಟ ನಡೆಯಲಿದ್ದು, ಎ.10ರಂದು ‘ಪುತ್ತೂರ ಮುತ್ತು’ ಗೌರವ ಪ್ರಶಸ್ತಿ ಪ್ರದಾನ, ಸನ್ಮಾನ ಸಮಾರಂಭ ನಡೆಯಲಿದೆ ಎಂದು ಪುತ್ತೂರು ಸಿಟಿ ಫ್ರೆಂಡ್ಸ್ ಸಂಚಾಲಕ ರಝಾಕ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.8ರಂದು ನಗರಸಭೆ ಸದಸ್ಯ ರಾಜೇಶ್ ಬನ್ನೂರು ಪಂದ್ಯಾಟ ಉದ್ಘಾಟಿಸಲಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕ ನವೀನ್ ಭಂಡಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭ ಪುತ್ತೂರು ಸರಕಾರಿ ಆಸ್ಪತ್ರೆಗೆ ನುಸಿಕೊಡೆ, ಫ್ಯಾನ್‌ನ್ನು ಕೊಡುಗೆಯಾಗಿ ನೀಡಲಾಗುವುದು ಎಂದು ತಿಳಿಸಿದರು. ಎ.10ರಂದು ಸಮಾರೋಪ ನಡೆಯಲಿದ್ದು, ಪೊಲೀಸ್ ಇಲಾಖೆ, ಪ್ರೆಸ್‌ಕ್ಲಬ್, ಮೆಸ್ಕಾಂ, ಲಾಯರ್, ಪಿ.ಟಿ, ಬ್ಯಾಂಕ್‌ನ ತಂಡಗಳಿಗೆ ಪುತ್ತೂರ ಮುತ್ತು ಗೌರವ ಪ್ರಶಸ್ತಿ ಪ್ರದಾನ ನಡೆಯಲಿದೆ. ಅಲ್ಲದೆ ಗಾಯಕ ಪುತ್ತೂರು ನರಸಿಂಹ ಭಟ್ ಅವರನ್ನು ಸನ್ಮಾನಿಸಲಾಗುವುದು. ಪ್ರಥಮ ಬಹುಮಾನವಾಗಿ 25,016 ರೂ, ದ್ವಿತೀಯ 10,016 ರೂ, ತೃತೀಯ ಹಾಗೂ ಚತುರ್ಥ ಟ್ರೋಫಿ ನೀಡಲಾಗುವುದು. ಸಮಾರೋಪದ ಬಳಿಕ ವಿಜೇತ ತಂಡಕ್ಕೆ 13 ಹೆಲ್ಮೆಟ್‌ಗಳನ್ನು ನೀಡಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಸಿಟಿ ಫ್ರೆಂಡ್ಸ್ ಗೌರವಾಧ್ಯಕ್ಷ ಹರೀಶ್ ಕಾಮತ್, ಸಹಸಂಘಟನಾ ಕಾರ್ಯದರ್ಶಿ ಇಬ್ರಾಹೀಂ ಬಿ., ಸಾದಿಕ್ ಬಪ್ಪಳಿಗೆ ಉಪಸ್ಥಿತರಿದ್ದರು.
ಇಂದು ಯುವ ಬಂಟರ ದಿನಾಚರಣೆ
ಪುತ್ತೂರು, ಎ.7: ಪುತ್ತೂರು ತಾಲೂಕು ಯುವ ಬಂಟರ ಸಂಘದ ನೇತೃತ್ವದಲ್ಲಿ ಯುವ ಬಂಟರ ದಿನಾಚರಣೆ, ಸಾಂಸ್ಕೃತಿಕ ಮತ್ತು ಸನ್ಮಾನ ಕಾರ್ಯಕ್ರಮ, ಯುವ ಬಂಟರ ಪ್ರತಿಭಾನ್ವೇಷಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಎ.8ರಂದು ಪುತ್ತೂರಿನ ಬಂಟರ ಭವನದಲ್ಲಿ ನಡೆಯಲಿದೆ ಎಂದು ಸಂಘದ ನಿಯೋಜಿತ ಅಧ್ಯಕ್ಷ ಸೀತಾರಾಮ ಶೆಟ್ಟಿ ಕಂಬಳತ್ತಡ್ಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಸ್. ಬಿ.ಜಯರಾಮ ರೈ ಬಳಜ್ಜ ಉದ್ಘಾಟಿಸುವರು. ಸಭಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಉದ್ಘಾಟಿಸುವರು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸುವರು. ಜಿಪಂ ಸದಸ್ಯರಾಗಿ ಆಯ್ಕೆಯಾದ ಅನಿತಾ ಹೇಮನಾಥ ಶೆಟ್ಟಿ ಮತ್ತು ತಾಪಂ ಸದಸ್ಯರಾಗಿ ಆಯ್ಕೆಗೊಂಡಿರುವ ರಾಧಾಕೃಷ್ಣ ಆಳ್ವರನ್ನು ಅಭಿನಂದಿಸಲಾಗುವುದು.ಸುದ್ದಿಗೋಷ್ಠಿಯಲ್ಲಿ ರೋಶನ್ ರೈ ಬನ್ನೂರು, ಪ್ರಕಾಶ್ ರೈ ಸಾರಕೆರೆ, ನವೀನ್ ರೈ ಪಂಜಳ ಮತ್ತಿತರರು ಉಪಸ್ಥಿತರಿದ್ದರು.
ಕೊಲ್ಯ: ನಾಳೆ ಮಾಸ್ಟರ್ಸ್ ಕಬಡ್ಡಿ ಪಂದ್ಯಾಟ
ಮಂಗಳೂರು, ಎ.7: ತೊಕ್ಕೊಟ್ಟು ಕಾಪಿಕಾಡ್ ಉಮಾಮಹೇಶ್ವರಿ ಕಬಡ್ಡಿ ಅಕಾಡಮಿಯ ವತಿಯಿಂದ ಎ.ಜಯಣ್ಣ ಸ್ಮರಣಾರ್ಥ ದ.ಕ, ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ಮಟ್ಟದ ಹೊನಲು ಬೆಳಕಿನ ಮಾಸ್ಟರ್ಸ್ ಕಬಡ್ಡಿ ಕ್ರೀಡಾ ಸಂಗಮ ಎ. 9ರಂದು ಸಂಜೆ 6ಕ್ಕೆ ತೊಕ್ಕೊಟ್ಟು ಕೊಲ್ಯ ನಾಗ ಬ್ರಹ್ಮ ದೇವಸ್ಥಾನದ ಬಳಿಯ ಕ್ರೀಡಾಂಗಣದಲ್ಲಿ ನಡೆಯಲಿದೆ.
45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಈ ಪಂದ್ಯಾವಳಿಯಲ್ಲಿ ಆಡಲು ಅವಕಾಶ ಎಂದು ಅಕಾಡಮಿಯ ಅಧ್ಯಕ್ಷ ಗೋಪಿನಾಥ್ ಕಾಪಿಕಾಡ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪಂದ್ಯಾಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳನ್ನು ಗೌರವಿಸುವ ಕಾರ್ಯಕ್ರಮವೂ ನಡೆಯಲಿದೆ. ಅಕಾಡಮಿಯ ವತಿಯಿಂದ ಎಪ್ರಿಲ್ 20ರಿಂದ ಮೇ20ರ ತನಕ 12ರಿಂದ 15 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಉಚಿತ ಕಬಡ್ಡಿ ಶಿಬಿರವೂ ನಡೆಯಲಿದೆ ಎಂದರು. ಸುದ್ದಿ ಗೋಷ್ಠಿಯಲ್ಲಿ ಎ.ಜೆ. ಶೇಖರ್, ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ರತನ್ ಶೆಟ್ಟಿ ಉಪಸ್ಥಿತರಿದ್ದರು.
‘ಟ್ಯಾಲೆಂಟ್’ನಿಂದ ಮಹಿಳೆಯರಿಗೆ ಮಾಹಿತಿ ಕಾರ್ಯಾಗಾರ
ಕೃಷ್ಣಾಪುರ, ಎ.7: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಮಹಿಳೆಯರಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳು ಎಂಬ ವಿಷಯದಲ್ಲಿ ಮಾಹಿತಿ ಕಾರ್ಯಾಗಾರವು ಕೃಷ್ಣಾಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು. ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದ ಚೈತನ್ಯ ಶಾಲೆಯ ಪಿಟಿಎ ಅಧ್ಯಕ್ಷೆ ಅಸ್ಮಾ, ಶಿಕ್ಷಣ ನಮ್ಮೆಲ್ಲರ ಹಕ್ಕು. ಅದನ್ನು ಪಡೆಯುವುದರಲ್ಲಿ ನಾವು ಮುಂದೆ ಬರಬೇಕು. ಹೆಣ್ಣು ಮಕ್ಕಳು ಉನ್ನತ ವಿದ್ಯಾಭ್ಯಾಸವನ್ನು ಪಡೆದು ಸರಕಾರಿ ನೌಕರಿಯನ್ನು ಪಡೆಯುವಂತಾಗಬೇಕು ಎಂದರು. ಆಸರೆ ವಿಮೆನ್ಸ್ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷೆ ಶಬೀನಾ ಅಕ್ತರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಂಷಾದ್ ಕುಳಾಯಿ,ಯಾಸ್ಮಿನ್, ಆಸರೆ ವಿಮೆನ್ಸ್ ಫೌಂಡೇಶನ್‌ನ ಸದಸ್ಯೆ ಮುಮ್ತಾಝ್ ಉಪಸ್ಥಿತರಿದ್ದರು. ಫರೀದಾ ಜಿ.ಎ. ಗೋರಡ್ಕ ಸ್ವಾಗತಿಸಿದರು. ಅಫ್ರೀನಾ ವಂದಿಸಿದರು. ರಮ್ಲಾ ಬಿ. ನಿರೂಪಿಸಿದರು.
ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಆಧಾರ್ ನೋಂದಣಿ
ಉಡುಪಿ, ಎ.7: ಉಡುಪಿ ಜಿಲ್ಲೆಯಲ್ಲಿರುವ ನಾಗರಿಕರ ಆಧಾರ್ ನೊಂದಣಿಗಾಗಿ ಈಗಾಗಲೇ ಜಿಲ್ಲೆಯ ತಾಲೂಕು ಕಚೇರಿ, ನಾಡಕಚೇರಿಗಳು ಹಾಗೂ ಮೊಬೈಲ್ ಕಿಟ್‌ಗಳಾಗಿ ಒಟ್ಟು 22 ಆಧಾರ್ ನೊಂದಣಿ ಕಿಟ್‌ಗಳು ಕಾರ್ಯಾಚರಿಸುತ್ತಿದ್ದು, ಸಾರ್ವಜನಿಕರು ಆಧಾರ್ ನೋಂದಣಿ ಕೇಂದ್ರಗಳಲ್ಲಿ ತಮ್ಮ ಬಯೋಮೆಟ್ರಿಕ್ ನಡೆಸಲು ವಿಳಾಸದ ಪುರಾವೆ ಹಾಗೂ ಇನ್ನಿತರ ವಿವರಗಳನ್ನು ನಮೂದಿಸಿಕೊಂಡು ನೋಂದಣಿ ಮಾಡಿಕೊಳ್ಳಬೇಕಾಗಿದೆ. ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಆಧಾರ್ ನೋಂದಣಿ ಮಾಡಲು ಬಾಕಿ ಇರುವ ನಾಗರಿಕರಲ್ಲಿ ವಯೋವೃದ್ಧರು, ಮಾನಸಿಕ ಅಸ್ವಸ್ಥರು ಹಾಗೂ ಇತರ ಅಶಕ್ತ ವ್ಯಕ್ತಿಗಳನ್ನು ನೋಂದಣಿ ಮಾಡುವ ಸಲುವಾಗಿ ಅಂತಹ ನಾಗರಿಕರು ಅಥವಾ ಅವರ ಕುಟುಂಬದ ಸದಸ್ಯರು ಎ.11ರಿಂದ 16ರವರೆಗೆ ಮಲ್ಪೆ ಉಪಕಚೇರಿ ಮತ್ತು ಮಣಿಪಾಲ ಉಪಕಚೇರಿಯಲ್ಲಿ ಹಾಗೂ ಎ.18ರಿಂದ 23ರವರೆಗೆ ಪರ್ಕಳ ಉಪಕಚೇರಿ ಮತ್ತು ಬೈಲೂರು ಉಪಕಚೇರಿಗಳಲ್ಲಿ ಬೇಡಿಕೆಗಳನ್ನು ಸಲ್ಲಿಸಿದಲಿ,್ಲ ಬೇಡಿಕೆದಾರರ ಮನೆಗಳಿಗೆ ಆಪರೇಟರ್‌ಗಳನ್ನು ಕಳುಹಿಸಿ ಆಧಾರ್ ನೊಂದಣಿ ಮಾಡಿಸಲಾಗುವುದು ಎಂದು ನಗರಸಭಾ ಪೌರಾಯುಕ್ತರು ತಿಳಿಸಿದ್ದಾರೆ.
ಆರ್‌ಟಿಐ ಕಾರ್ಯಕರ್ತನ ಹತ್ಯೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಸಿಪಿಐ ಆಗ್ರಹ
ಮಂಗಳೂರು, ಎ. 7: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾರ ಹತ್ಯೆಯಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ತನಿಖೆಗೊಳಪಡಿಸಬೇಕೆಂದು ಸಿಪಿಐ ಆಗ್ರಹಿಸಿದೆ.
ಕ್ರಿಮಿನಲ್ ಹಿನ್ನೆಲೆಯುಳ್ಳವರನ್ನು ಕೊಲೆ ಮಾಡಿದರೆ ಸರಕಾರ ರಾಜಕೀಯ ಒತ್ತಡಕ್ಕೆ ಮಣಿದು ಪರಿಹಾರ ಘೋಷಿಸುತ್ತದೆ. ಆದರೆ ಇಂತಹ ಘಟನೆಗಳಲ್ಲಿ ಹತ್ಯೆಯಾದವರಿಗೆ ಸರಕಾರ ಪರಿಹಾರ ಘೋಷಣೆ ಮಾಡುವುದಿಲ್ಲ. ಇನ್ನಾದರೂ ಸರಕಾರ ಎಚ್ಚೆತ್ತು ಕೊಲೆಕಡುಕರನ್ನು ಕೂಡಲೇ ಬಂಧಿಸಿ ಶಿಕ್ಷಿಸುವುದರ ಮೂಲಕ ಬಾಳಿಗಾರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಸಿಪಿಐನ ದ.ಕ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಎ.11-13: ‘ಪಚ್ಚೆಪರ್ಬ -2016’ ಮಕ್ಕಳ ಶಿಬಿರ
ಬಂಟ್ವಾಳ, ಎ.7: ‘ನೀರು ನಮ್ಮ ಸಂಸ್ಕೃತಿ’ ಎಂಬ ಆಶಯದಲ್ಲಿ ಮಣಿನಾಲ್ಕೂರು, ಪಚ್ಚೆ ಅಂಗಳದಲ್ಲಿ 4ನೆ ವರ್ಷದ ಪಚ್ಚೆಪರ್ಬ-2016 ಮಕ್ಕಳ ಬೇಸಿಗೆ ಪರಿಸರ ಶಿಬಿರ ಎ.11ರಿಂದ 13ರವರೆಗೆ ನಡೆಯಲಿದೆ. ಅರಿವು ಯುವ ಸಂವಾದ ಕೇಂದ್ರ, ದ.ಕ.ಜಿಲ್ಲೆ., ರಂಗಸಾಂಗತ್ಯ ಮಣಿ ನಾಲ್ಕೂರು, ಅರಿವು ಪಚ್ಚೆ ಬಳಗ ಬಂಟ್ವಾಳ ಸಂಸ್ಥೆಗಳು ಸಂಯೋಜಿಸುತ್ತಿರುವ ಈ ಶಿಬಿರದಲ್ಲಿ ಹಾಡು, ನಾಟಕ, ಆಟಗಳ ಮೂಲಕ ಪರಿಸರದ ಮಕ್ಕಳಾಗುವ ಅವಕಾಶ ಸಿಗಲಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂ.: 9901410127ನ್ನು ಸಂಪರ್ಕಿಸುವಂತೆ ಶಿಬಿರ ನಿರ್ದೇಶಕ ನಾದ ಮಣಿನಾಲ್ಕೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.