ದುಬೈಯಿಂದ ನೂತನ ವೀಸಾ ವ್ಯವಸ್ಥೆ ಪ್ರಾರಂಭ
ದುಬೈ, ಎ. 8: ನಾಗರಿಕರು ಇಲ್ಲಿ ವೀಸಾ ಅರ್ಜಿ ಸಲ್ಲಿಸಲು ಜಿಡಿಆರ್‌ಎಫ್‌ಎ ಕೇಂದ್ರ ಕಚೇರಿಗೆ ಅಥವಾ ಯಾವುದೇ ಬಾಹ್ಯ ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ. ಯುಎಇ ವಿಷನ್ ವ್ಯವಸ್ಥೆ ಮೂಲಕ ಅರ್ಜಿ ಸಲ್ಲಿಸುವುದರಿಂದ ಹಿಡಿದು ಮಾಹಿತಿ ಬದಲಾವಣೆ ವರೆಗಿನ ಎಲ್ಲ ಸೇವೆಗಳನ್ನು ನಿರ್ವಹಿಸಬಹುದಾಗಿದೆ ಎಂದು ಜನರಲ್ ಡೈರೆಕ್ಟರೇಟ್ ಆಫ್ ರೆಸಿಡೆನ್ಸಿ ಅಂಡ್ ಫಾರಿನ್ ಅಫೇರ್ಸ್ ಮಹಾನಿರ್ದೇಶಕ ಮೇಜರ್ ಜನರಲ್ ಮುಹಮ್ಮದ್ ಅಹ್ಮದ್ ಅಲ್ ಮರ್ರಿ ಹೇಳಿದ್ದಾರೆ.
ದುಬೈ ಜಾರಿಗೆ ತಂದಿರುವ ಹೊಸ ವೀಸಾ ವ್ಯವಸ್ಥೆ ನಾಗರಿಕರಿಗೆ ಹಲವು ಸೌಕರ್ಯಗಳನ್ನು ಕಲ್ಪಿಸಿದೆ. ವೀಸಾ ಅರ್ಜಿ ಸಲ್ಲಿಕೆ, ವಿಳಾಸ ಬದಲಾವಣೆ, ಹೊಸ ರೆಸಿಡೆನ್ಸಿಗೆ ಅರ್ಜಿ ಸಲ್ಲಿಸುವುದು, ವೀಸಾ ರದ್ದತಿ ಮತ್ತಿತರ ಸಂಬಂಧಿತ ಸೇವೆಗಳು ಇದರಲ್ಲಿ ಸೇರಿವೆ. ಆಂಗೀಕೃತ ಟೈಪಿಂಗ್ ಸರ್ವಿಸ್ ಕೇಂದ್ರಗಳ ಮುಖಾಂತರ ಎಲ್ಲ ವಹಿವಾಟುಗಳನ್ನು ನಡೆಸಲು ಅವಕಾಶವಿದೆ.
ಯುಎಇ ವಿಷನ್ ವ್ಯವಸ್ಥೆ ಸಾರ್ವಜನಿಕರ ಸಮಯ ಹಾಗೂ ಶ್ರಮವನ್ನು ಉಳಿಸುವಲ್ಲಿ ಮಹತ್ವದ ಯೋಜನೆಯಾಗಿದೆ. ಜಿಡಿಆರ್‌ಎಫ್ ಕಚೇರಿಗಳಿಗೆ ಅಲೆದಾಡುವ ಬದಲು ಕೇವಲ ಟೈಪಿಂಗ್ ಸೇವಾ ಕೇಂದ್ರಗಳಲ್ಲೇ ಎಲ್ಲ ಅಗತ್ಯ ಸೇವೆ ಪಡೆಯಬಹುದು ಎಂದು ಆಡಳಿತ ವಿಭಾಗದ ಸಹಾಯಕ ಕರ್ನಲ್ ಹುಸೇನ್ ಇಬ್ರಾಹಿಂ ವಿವರಿಸಿದರು.
ಕಕ್ಷಿದಾರರು ಮುಂದಿನ ಸಂಪರ್ಕಕ್ಕೆ ಪೂರಕವಾಗುವಂತೆ ಸಮರ್ಪಕವಾಗಿ ದೂರವಾಣಿ ಸಂಖ್ಯೆ, ವಿಳಾಸ ಹಾಗೂ ಇ-ಮೇಲ್ ನೀಡಬೇಕು. ಭೇಟಿ ವೀಸಾ ಸಂಬಂಧಿ ವಹಿವಾಟುಗಳಿಗೆ ಇ-ಮೇಲ್ ಸಂದೇಶ ಕಳುಹಿಸಬಹುದು ಮತ್ತು ನಿವಾಸಿ ವೀಸಾ ಸಂಬಂಧಿ ಸೆವೆಗಳಿಗೆ ಝಜೆಲ್ ಕೊರಿಯರ್ ಮೂಲಕ ವಿವರಗಳನ್ನು ಕಳುಹಿಸಬೇಕಾಗುತ್ತದೆ.
ಒಂದು ತಿಂಗಳ ಕಾಲ ಇದನ್ನು ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ದಾಖಲಾತಿಗಳನ್ನು ಸಲ್ಲಿಸಿದ ಬಳಿಕ ಇಮಿಗ್ರೇಶನ್ ವಿಭಾಗದ ಕ್ಲಿಯರೆನ್ಸ್ ಸಿಗುವವರೆಗೂ ’ಇನ್ ಪ್ರೊಸೆಸ್’’ ಸ್ಟೇಟಸ್ ಬರುತ್ತದೆ. ಗ್ರಾಹಕರಿಗೆ ಅಂತಿಮವಾಗಿ ಎಸ್‌ಎಂಎಸ್ ಸಂದೇಶದ ಮೂಲಕ ಅಂತಿಮ ನೋಟಿಫಿಕೇಶನ್ ಬರುತ್ತದೆ ಎಂದು ಹೇಳಿದರು,