ನಂತೂರು -ಕದ್ರಿ ಮಲ್ಲಿಕಟ್ಟೆ ರಸ್ತೆ ಹತ್ತು ದಿನಗಳೊಳಗೆ ಪೂರ್ಣ: ಜೆ.ಆರ್.ಲೋಬೊ
ಮಂಗಳೂರು, ಎ.8: ನಂತೂರು ಮತ್ತು ಕದ್ರಿ ಮಲ್ಲಿಕಟ್ಟೆ ಕಾಂಕ್ರೀಟಿಕರಣ ಕಾಮಾಗಾರಿ ಹತ್ತು ದಿನಗಳೊಳಗೆ ಪೂರ್ಣಗೊಂಡು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು.
ಅವರು ಕದ್ರಿ ಮಲ್ಲಿಕಟ್ಟೆಯಿಂದ ನಂತೂರು ಮಧ್ಯೆ ನಿರ್ಮಾಣವಾಗುತ್ತಿರುವ ಕಾಂಕ್ರಿಟ್ ರಸ್ತೆಯ ಪರಿಶೀಲನೆಯನ್ನು ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನಂತೂರು ಮತ್ತು ಕದ್ರಿ ಮಲ್ಲಿಕಟ್ಟೆ ಮಧ್ಯೆ ನಡೆಯುತ್ತಿರುವ ಕಾಂಕ್ರಿಟೀಕರಣದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು ಇನ್ನು ಚರಂಡಿ, ಪುಟ್ ಪಾತ್ ನಿರ್ಮಾಣದ ಕಾಮಾಗಾರಿಗಳು ಮುಂದೆ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಇಂಜಿನಿಯರ್‌ಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಚರ್ಚಿಸಲಾಯಿತು ಎಂದು ತಿಳಿಸಿದರು. ರಸ್ತೆಯು ಕಾಂಕ್ರಿಟೀಕರಣಗೊಂಡು ಉದ್ಘಾಟನೆಯ ನಂತರ ವಾಹನಗಳು ವೇಗವಾಗಿ ಚಲಿಸುವುದರಿಂದ ಆಗಲಿರುವ ಸಮಸ್ಯೆ, ತ್ಯಾಜ್ಯ ನೀರು ಹರಿದಾಡುವ ಬಗ್ಗೆ ಜನರು ತಮ್ಮ ಅಹವಾಲು ತಿಳಿಸಿದ್ದು ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ನಂತೂರಿನಿಂದ ಕಂಕನಾಡಿ ನಂದಿಗುಡ್ಡೆಯವರೆಗೆ ಈ ರೀತಿಯ ಉತ್ತಮ ರಸ್ತೆಯನ್ನು ಮಾಡಲು ಚಿಂತಿಸಲಾಗಿದ್ದು ಈ ರಸ್ತೆ ನಿರ್ಮಾಣವಾದರೆ ಮಾದರಿ ರಸ್ತೆಯೊಂದು ನಿರ್ಮಾಣವಾಗಿ ನಗರದ ಸೌಂದರ್ಯ ಹೆಚ್ಚಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮನಪಾ ಸದಸ್ಯ ಅಶೋಕ್ ಕುಮಾರ್ ಡಿ.ಕೆ, ಇಂಜಿನಿಯರ್‌ಗಳಾದ ಲಿಂಗೇಗೌಡ, ಲಕ್ಷ್ಮಣ್ ಪೂಜಾರಿ, ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಟಿ.ಕೆ. ಜೊತೆಗಿದ್ದರು.
ಬಸ್ ಬೇ ನಿರ್ಮಾಣ
ನಂತೂರು ನಲ್ಲಿ ಯಾವಾಗಲು ಸಂಚಾರಕ್ಕೆ ಅಡೆ ತಡೆ ಆಗುತ್ತಿರುವುದರಿಂದ ಮುಂದೆ ನಂತೂರು ಜಂಕ್ಷನ್ ನಲ್ಲಿ ಬಸ್ ಸಂಚಾರಕ್ಕೆ ಸಮಸ್ಯೆಯಾಗದಂತೆ ಜಂಕ್ಷನ್ ನಿಂದ ಸ್ವಲ್ಪ ದೂರದಲ್ಲಿ ಬಸ್ ಬೇ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಜೆ.ರ್.ಲೋಬೋ ಹೇಳಿದರು. ಈಗ ಇರುವ ಬಸ್ ನಿಲ್ದಾಣವನ್ನು ತೆಗದು ಸಂಚಾರಕ್ಕೆ ಸಮಸ್ಯೆಯಾಗದಂತೆ ಬಸ್ ಬೇ ನಿರ್ಮಿಸಲಾಗುವುದು ಎಂದವರು ಹೇಳಿದರು.