×
Ad

ಕೊಣಾಜೆ: ವಿವಿ ಯಕ್ಷಗಾನ ಕೇಂದ್ರದಲ್ಲಿ ‘ಮಿಜಾರು ನೆನಪು’

Update: 2016-04-08 16:56 IST

ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮ್ತತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಶುಕ್ರವಾರ ‘ಮಿಜಾರು ನೆನಪು’ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಸದಾಶಿವ ಶೆಟ್ಟಿಗಾರ್ ಮಾತನಾಡಿದರು.

ಕೊಣಾಜೆ: ಯಕ್ಷಗಾನದ ಮೂರು ತಲೆಮಾರುಗಳ ಜತೆಗಿದ್ದು ಸಾಕಷ್ಟು ಅನುಭವನ್ನು ಹೊಂದಿದ ಕಲಾವಿದರಾದ ಮಿಜಾರು ಅಣ್ಣಪ್ಪ ಅವರು ಆರಂಭದ ದಿನಗಳಲ್ಲಿ ರಾಕ್ಷಸ ವೇಷ, ಪುಂಡುವೇಷ ಇತ್ಯಾದಿಗಳನ್ನು ನಿರ್ವಹಿಸಿ ಪ್ರಸಿದ್ದರಾದವರು. ಅಚಾನಕಾಗಿ ಹಾಸ್ಯವೇಷವನ್ನು ನಿರ್ವಹಿಸಬೇಕಾಗಿ ಬಂದ ಸಂದರ್ಭವನ್ನು ಸವಾಲಾಗಿ ಸ್ವೀಕರಿಸಿ ಬಳಿಕ ಯಕ್ಷಗಾನದ ಹಾಸ್ಯ ರತ್ನವಾಗಿ ಮೂಡಿಬಂದಿದ್ದಾರೆ ಎಂದು ಯಕ್ಷಗಾನ ಕಲಾವಿದ ಸದಾಶಿವ ಶೆಟ್ಟಿಗಾರ್ ಅವರು ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮ್ತತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಶುಕ್ರವಾರ ನಡೆದ ‘ಮಿಜಾರು ನೆನಪು’ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ.ಧನಂಜಯ ಕುಂಬ್ಳೆ ಅವರು ಮಾತನಾಡಿ, ಬದುಕಿನಲ್ಲಿ ತೀವ್ರ ಕಷ್ಟದ ದಿನಗಳನ್ನು ಸಾಗಿಸಿದ ಮಿಜಾರು ಅಣ್ಣಪ್ಪರವರು ನೋವು ನುಂಗಿ ಪ್ರೇಕ್ಷಕರನ್ನು ತಮ್ಮ ಹಾಸ್ಯದ ಮೂಲಕ ನಗಿಸಿದವರು. ಸುದೀರ್ಘ ಕಾಲ ಯಕ್ಷಗಾನ ರಂಗದಲ್ಲಿ ಸೇವೆ ಸಲ್ಲಿಸಿದ ಅವರ ತ್ಯಾಗ ಮತ್ತು ಸಮರ್ಪಣಾ ಮನೋಭಾವ ಎಲ್ಲಾ ಕಲಾವಿದರಿಗೂ ಮಾದರಿಯಾಗಿದೆ. ಅವರ ಹಾಸ್ಯದ ತುಣುಕುಗಳ ಸಂಗ್ರಹ ಮತ್ತು ಅಧ್ಯಯನ ತುಳು ಮತ್ತು ತೆಂಕುತಿಟ್ಟು ಯಕ್ಷಗಾನದ ಅಧ್ಯಯನಕ್ಕೆ ಪೂರಕವಾಗಬಲ್ಲುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರದ ಸಂಶೋಧನಾಧಿಕಾರಿ ಡಾ. ರಾಜಶ್ರೀ, ಸಂಶೋಧನಾ ಸಹಾಯಕ ಸತೀಶ್ ಕೊಣಾಜೆ, ಯುವ ಯಕ್ಷಗಾನ ಕಲಾವಿದ ದೀವಿತ್ ಶ್ರೀಧರ್ ಕೋಟ್ಯಾನ್, ಭಾಗವತರಾದ ಶ್ರೀನಿವಾಸ ಬಳ್ಳಮಂಜ ಮತ್ತು ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ಮೌನ ಪ್ರಾರ್ಥನೆಯ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು.

ವಿವಿ ಯಕ್ಷಮಂಗಳ ತಂಡದಿಂದ ‘ಸಾಯುಜ್ಯ ಸಂಗ್ರಾಮ’

   ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರವು ಯುವ ಮನಸ್ಸುಗಳಲ್ಲಿ ಯಕ್ಷಗಾನದ ಆಸಕ್ತಿಯನ್ನು ಪ್ರೇರೇಪಿಸುವ ದೃಷ್ಟಿಯಿಂದ ಕಳೆದ ಕೆಲವು ವರ್ಷಗಳಿಂದ ಕೇಂದ್ರದಲ್ಲಿ ಯಕ್ಷಗಾನ ತರಬೇತಿ ತರಗತಿಯನ್ನು ನಡೆಸುತ್ತಿದ್ದು ಯಕ್ಷಮಂಗಳ ವಿದ್ಯಾರ್ಥಿ ತಂಡವನ್ನು ರೂಪಿಸಿದೆ. ಪ್ರತೀ ವರ್ಷ ತರಬೇತುಗೊಂಡ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನವನ್ನು ವಿವಿಯ ಆವರಣದಲ್ಲಿ ನಡೆಸುತ್ತಾ ಬರುತ್ತಿದ್ದು ಇದೀಗ ಇದರ ವಿಸ್ತರಿತ ಭಾಗವಾಗಿ ವಿಶ್ವವಿದ್ಯಾನಿಲಯದಿಂದ ಹೊರಗಡೆ ಪ್ರಥಮ ಪ್ರದರ್ಶನವನ್ನು ನೀಡಲು ತಂಡ ಸನ್ನದ್ದಗೊಂಡಿದೆ. ಎ.10ರಂದು ಭಾನುವಾರ ಮಧ್ಯಾಹ್ನ 2.30ರಿಂದ ಮಡಂತ್ಯಾರು ಸಮೀಪದ ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ಕ್ಷೇತ್ರದಲ್ಲಿ ಯಕ್ಷಮಂಗಳ ವಿದ್ಯಾರ್ಥಿ ತಂಡದ ಮೊದಲ ತಿರುಗಾಟದ ಪ್ರದರ್ಶನ ನಡೆಯಲಿದೆ. ಯಕ್ಷಗಾನ ಕಲಾವಿದ ಸದಾಶಿವ ಶೆಟ್ಟಿಗಾರ್ ಇವರ ನಿರ್ದೇಶನದಲ್ಲಿ ಸಿದ್ದಗೊಂಡಿರುವ ಸಾಯುಜ್ಯ ಸಂಗ್ರಾಮ ಎಂಬ ಪ್ರದರ್ಶನ ಏರ್ಪಡಿಸಲಾಗಿದೆ. ಹಿಮ್ಮೇಳದಲ್ಲಿ ಶ್ರೀನಿವಾಸ ಬಳ್ಳಮಂಜ, ಮಯೂರ ನಾಯ್ಗ, ನಿಖಿಲ್ ಪೈ ಮತ್ತು ಹರಿಶ್ಚಂದ್ರ ಕೋಟೆಕಾರ್ ಭಾಗವಹಸಿಲಿದ್ದಾರೆ. ಮುಮ್ಮೇಳದಲ್ಲಿ ಮಂಗಳೂರು ವಿವಿಯ ವಿವಿಧ ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿಗಳಾದ ಅಭಿಲಾಷ್, ಉಷಾ,ಕೆ, ಕಾಜಲ್, ಕಾವ್ಯಶ್ರೀ, ಚೈತ್ರ ಪೂಜಾರಿ, ದೀಕ್ಷಾ ಎಸ್.ಎಂ, ನವೀನ್ ಕೆ, ನಾಗಶ್ರೀ, ಪ್ರವೀಣ್ ಕೆ, ರವಿಕಾಂತ್ ಪೂಜಾರಿ, ರೂಪೇಶ್, ವಿದ್ಯಾ ಜೆ.ಎಸ್, ವಿನುತ ಕೆ, ವಿನುತ ಡಿ, ಶಾಂಭವಿ ಭಟ್, ಶ್ರೀಶ, ಶ್ರುತಿ ಎನ್.ಟಿ. ಸವಿತಾ ಎಂ, ಸಾಯಿಸುಮ, ಸುಶಿತ್, ಸೂರಜ್ ಕೋಟ್ಯಾನ್ ಮೊದಲಾದವರು ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News