ಊಟಿ : ಎಸ್‌ಡಿಪಿಐ ಚಿಂತನ ಮಂಥನ ಸಭೆ
ಊಟಿ, ಎ.8: ಎಸ್‌ಡಿಪಿಐ ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸಮಿತಿಯ ಚಿಂತನ ಮಂಥನ ಸಭೆಯು ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಅಬ್ದುಲ್ ಹನ್ನಾನ್‌ರ ಅಧ್ಯಕ್ಷತೆಯಲ್ಲಿ ತಮಿಳುನಾಡಿನ ಊಟಿಯಲ್ಲಿ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ಪಕ್ಷದ ಪ್ರಸ್ತುತ ಕಾರ್ಯವೈಖರಿ ಮತ್ತು ಭವಿಷ್ಯದಲ್ಲಿ ಪಕ್ಷದ ಕಾರ್ಯವೈಖರಿ ಹೇಗಿರಬೇಕು ಎಂಬುದರ ಬಗ್ಗೆ ರಾಜ್ಯ ಮತ್ತು ಜಿಲ್ಲಾ ನಾಯಕರು ತಮ್ಮ ವಿಚಾರ ಮಂಡಿಸಿದರು. ಮುಖ್ಯ ಅತಿಥಿಯಾಗಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎ.ಸಯೀದ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಹೋರಾಟ ಪ್ರಭಾವಶಾಲಿಯಾಗಿ ದೇಶದ ಜನರ ಒಟ್ಟು ಹಿತಾಸಕ್ತಿಯನ್ನು ಕಾಪಾಡಬೇಕಾಗಿದೆ. ಇಂದು ದೇಶದ ರಾಜಕೀಯ ವ್ಯವಸ್ಥೆ ತೀರಾ ಹದಗೆಟ್ಟಿದ್ದು, ಚುನಾಯಿತ ಜನಪ್ರತಿನಿಧಿಗಳು ಸಿದ್ಧಾಂತವನ್ನು ಮರೆತು ಹಣ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ. ಎಸ್.ಡಿ.ಪಿ.ಐ ದೇಶದ ಎಲ್ಲಾ ಅವಕಾಶ ವಂಚಿತ ವರ್ಗಗಳ ಸಮಾನಹಕ್ಕುಗಳಿಗಾಗಿ ನಿರಂತರ ಹೋರಾಡುತ್ತಿದೆ. ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಸಮಗ್ರವಾದ ಸುಧಾರಣೆಯಾಗಬೇಕು. ದೇಶದ ಜಾತ್ಯತೀತ ವ್ಯವಸ್ಥೆಗೆ ಧಕ್ಕೆಯಾಗುವ ಸ್ಥಿತಿ ನಿರ್ಮಾಣವಾಗಿದೆ. ರಾಷ್ಟ್ರದ ಸರ್ವಧರ್ಮ ಸಮಭಾವ ಸಂಸ್ಕೃತಿ ಗಟ್ಟಿಗೊಳಿಸಬೇಕೆಂದು ಎಸ್.ಡಿ.ಪಿ.ಐ ಬಯಸುತ್ತಿದೆ ಎಂದರು. ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಲತೀಫ್ ಮತ್ತು ಅಬ್ದುಲ್ ಮಜೀದ್ ಕೊಡ್ಲಿಪೇಟೆ, ಕಾರ್ಯದರ್ಶಿಗಳಾದ ಅಕ್ರಂ ಹಸನ್ ಮೊದಲಾದವರು ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ವಿಚಾರ ಮಂಡಿಸಿದರು. ಇತರೆ ರಾಜ್ಯ ಹಾಗೂ ಜಿಲ್ಲಾ ನಾಯಕರು ಪಕ್ಷ ಬೆಳವಣಿಗೆ ಕುರಿತು ತಮ್ಮ ಅಭಿಪ್ರಾಯ ತಿಳಿಸಿದರು. ಈ ಸಭೆಯಲ್ಲಿ ಮುಂಬರುವ ಎಲ್ಲಾ ಸ್ಥಳೀಯ ಮತ್ತು ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷ ರಾಜ್ಯದಾದ್ಯಂತ ಸ್ಪರ್ಧಿಸುವ ಬಗ್ಗೆ ಮಹತ್ವಪೂರ್ಣ ನಿರ್ಧಾರವನ್ನು ಕೈಗೊಳ್ಳಲಾಯಿತು. ರಾಜ್ಯ ಕಾರ್ಯದರ್ಶಿ ಅಲ್ಫಾನ್ಸೊ ಫ್ರಾಂಕೊ ವಂದಿಸಿದರು. ಉಪಾಧ್ಯಕ್ಷ ಪ್ರೊ.ಶಬ್ಬೀರ್ ಮುಸ್ತಫಾ, ರಾಜ್ಯ ಸಮಿತಿ ಸದಸ್ಯರಾದ ಕೂಸಪ್ಪಪುತ್ತೂರು ಮತ್ತು ಬಿ.ಬಿ.ಎಂ.ಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮುಜಾಹಿದ್ ಪಾಶಾ ಉಪಸ್ಥಿತರಿದ್ದರು. ರಾಜ್ಯ ಸಮಿತಿ ಸದಸ್ಯ ರಿಯಾಝ್ ಫರಂಗಿಪೇಟೆ ಕಾರ್ಯಕ್ರಮ ನಿರೂಪಿಸಿದರು.