×
Ad

‘ದರ್ಶನರತಿ’ಯಿಂದ ಮಹಿಳೆಯರ ಖಾಸಗಿತನದ ಉಲ್ಲಂಘನೆ: ನ್ಯಾಯಾಲಯ

Update: 2016-04-08 19:41 IST

ಹೊಸದಿಲ್ಲಿ,ಎ.8: ಪುರುಷರು ‘ದರ್ಶನರತಿ’ ಅಥವಾ ಮಹಿಳೆಯರಿಗೆ ತಿಳಿಯದಂತೆ ಅವರ ದೇಹಸೌಂದರ್ಯದ ಆಸ್ವಾದನೆಯಲ್ಲಿ ತೊಡಗುವುದು ಮಹಿಳೆಯರ ಖಾಸಗಿತನದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ದಿಲ್ಲಿಯ ಮಹಾನಗರ ನ್ಯಾಯಾಲಯವು,ಈ ಅಪರಾಧವನ್ನೆಸಗಿದ್ದಕ್ಕಾಗಿ ಯುವಕನೋರ್ವನಿಗೆ ಜೈಲುಶಿಕ್ಷೆಯನ್ನು ವಿಧಿಸಿದೆ.

 ಮಹಿಳೆಯರ ವಿರುದ್ಧದ ಅಪರಾಧಗಳನ್ನು ಎಳ್ಳಷ್ಟೂ ಸಹಿಸುವಂತಿಲ್ಲ ಎಂದು ಒತ್ತಿ ಹೇಳಿದ ನ್ಯಾಯಾಲಯವು,ಲಿಂಗ ಸಮಾನತೆಯ ಬಗ್ಗೆ ಯುವಕರಲ್ಲಿ ಅರಿವು ಮೂಡಿಸಲು ನೀತಿಗಳನ್ನು ರೂಪಿಸುವಂತೆ ಸರಕಾರಕ್ಕೆ ಸೂಚಿಸಿತು.

ಮಹಿಳೆಯರ ಶೌಚಗೃಹದಲ್ಲಿ ಇಣುಕಿ ನೋಡಿದ್ದಕ್ಕಾಗಿ 19ರ ಹರೆಯದ ಯುವಕನನ್ನು ಐಪಿಸಿಯ ಕಲಂ 354ರಡಿ ತಪ್ಪಿತಸ್ಥನೆಂದು ಘೋಷಿಸಿದ ನ್ಯಾ.ಸುಶೀಲ ಬಾಲಾ ದಗರ್ ಅವರು ಒಂದು ವರ್ಷದ ಶಿಕ್ಷೆಯನ್ನು ವಿಧಿಸಿ ಜೈಲಿಗೆ ತಳ್ಳಿದರು. ಅಲ್ಲದೆ ದಂಡರೂಪವಾಗಿ ಸಂತ್ರಸ್ತ ಮಹಿಳೆಗೆ 10,000 ರೂ.ಗಳನ್ನು ಪಾವತಿಸುವಂತೆಯೂ ಆದೇಶಿಸಿದರು.

 ದರ್ಶನರತಿಯು ಪುರುಷರ ಪಾಲಿಗೆ ಮನೋರಂಜನೆಯ ನಾಚಿಕೆಗೇಡಿನ ರೂಪವಾಗಿದೆ,ಆದರೆ ಅದು ಮಹಿಳೆಯರಿಗೆ ಮಾನಸಿಕ ಹಿಂಸೆಯಾಗಿದೆ. ಇಂತಹ ಕೃತ್ಯದಲ್ಲಿ ತೊಡಗುವವರು ತಾವು ಮಹಿಳೆಯರ ಶರೀರದ ಖಾಸಗಿತನದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತಿದ್ದೇವೆ ಎನ್ನುವುದನ್ನು ಅರಿತುಕೊಳ್ಳುವಂತೆ ಕಾಣುತ್ತಿಲ್ಲ. ಇಂತಹ ಅಪರಾಧಿಗಳಿಂದಾಗಿ ತಮ್ಮನ್ನು ಯಾರೂ ನೋಡಬಾರದೆಂದು ಮಹಿಳೆಯರು ಸಾಮಾನ್ಯವಾಗಿ ಅಪೇಕ್ಷಿಸುವ ಇಂತಹ ಸ್ಥಳಗಳಲ್ಲಿಯೂ ಅವರಿಗೆ ಸುರಕ್ಷತೆಯ ಭಾವನೆ ಇರುವುದಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News