ಅಜೆಕಾರು : ಹಾಡಿಯಂಗಡಿ ಬಸದಿ ವಿಗ್ರಹಗಳು ಅಂಡಾರು ಬಳಿ ಪತ್ತೆ
ಅಜೆಕಾರು, ಎ.8: ಕಳೆದ ಫೆ.20-21ರ ರಾತ್ರಿ ಶಿರ್ಲಾಲು ಗ್ರಾಮದ ಹಾಡಿಯಂಗಡಿ ಅನಂತನಾಥ ಸ್ವಾಮಿ ಬಸದಿಯಿಂದ ಕಳವು ಮಾಡಲಾದ ಲಕ್ಷಾಂತರ ರೂ. ವೌಲ್ಯದ ದೇವರ ವಿಗ್ರಹ ಹಾಗೂ ಸೊತ್ತುಗಳಲ್ಲಿ ಐದು ವಿಗ್ರಹಗಳು ಇಂದು ಬೆಳಗ್ಗೆ ಅಂಡಾರು ಗ್ರಾಮದ ಮಂಗಪಾಡಿ ಬಳಿಯ ಕಾಡುಹೊಳೆ ಮೋರಿಯ ಬದಿಯಲ್ಲಿ ಗೋಣಿಚೀಲದಲ್ಲಿ ಪತ್ತೆಯಾಗಿವೆ.
ಕಾಡಿನ ಮಧ್ಯದಲ್ಲಿರುವ ಸಣ್ಣ ತೊರೆಗೆ ನಿರ್ಮಿಸಲಾದ ಮೋರಿಯ ಬದಿಯಲ್ಲಿ ಗೋಣಿಚೀಲದಲ್ಲಿ ಇರಿಸಿದ ಮೂರ್ತಿಗಳನ್ನು ಸ್ಥಳೀಯರಾದ ಶ್ರೀಧರ ಆಚಾರಿ ಎಂಬವರು ಬೆಳಗ್ಗೆ 10 ಗಂಟೆ ಸುಮಾರಿಗೆ ಗಮನಿಸಿ ಊರಿನವರಿಗೆ ಹಾಗೂ ಅಜೆಕಾರು ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದರು. ಹಾಡಿಯಂಗಡಿ ಬಸದಿಯಿಂದ ಕಳವು ಮಾಡಲಾದ ಪುರಾತನ ವಿಗ್ರಹಗಳಲ್ಲಿ ಐದನ್ನು ಮಾತ್ರ ಕಳ್ಳರು ಒಂದೂವರೆ ತಿಂಗಳ ಬಳಿಕ ಯಾಕೆ ಇಲ್ಲಿಟ್ಟು ಹೋದರು ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕದ್ದವಸ್ತುಗಳಲ್ಲಿ ಸುಮಾರು 75,000ರೂ. ವೌಲ್ಯದ ಆದಿನಾಥ ಸ್ವಾಮಿಯ ಪಂಚಲೋಹದಮೂರ್ತಿ, ಭರತ ಸ್ವಾಮಿಯ ಪಂಚಲೋಹದ ಮೂರ್ತಿ, ಬಾಹುಬಲಿ ಸ್ವಾಮಿಯ ಪಂಚಲೋಹದ ಮೂರ್ತಿ, ಅನಂತಸ್ವಾಮಿಯ ಪಂಚಲೋಹದ ಮೂರ್ತಿ ಹಾಗೂ ಇನ್ನೊಂದು ಶೆರ್ವಾಣಿ ಯಕ್ಷಿ ತಾಮ್ರದ ಮೂರ್ತಿಗಳನ್ನು ಗೋಣಿಚೀಲದಲ್ಲಿ ತುಂಬಿಸಿ ಇಟ್ಟು ಹೋಗಿದ್ದಾರೆ. ಆದರೆ ಇನ್ನೂ ಒಂದೂವರೆ ಲಕ್ಷ ರೂ.ಗಳಿಗೂ ಅಧಿಕ ವೌಲ್ಯದ ಪದ್ಮಾವತಿ ಅಮ್ಮನ ಪಂಚ ಲೋಹದ ಮೂರ್ತಿ, ಚಿನ್ನದ ಮುಖವಾಡ, ಬೆಳ್ಳಿಯ ಕವಚ, ಚಿನ್ನದ ಬಂಧಿ, 4 ಬೆಳ್ಳಿಯ ಪಕ್ಕಿ ನಿಶಾನೆ, ಬೆಳ್ಳಿಯ ಸತ್ತಿಗೆ, 2 ಚಿನ್ನದ ಕರಿಮಣಿ, ಚಿನ್ನದ ಬಳೆ, ಅನಂತನಾಥ ಸ್ವಾಮಿಯ ಬೆಳ್ಳಿಯ ಪ್ರಭಾವಳಿ, ಬೆಳ್ಳಿಯ ಸತ್ತಿಗೆ ಯನ್ನು ಕಳ್ಳರು ಫೆ.20-21ರಂದು ಕದ್ದೊಯ್ದಿದ್ದು, ಅವುಗಳು ಪತ್ತೆಯಾಗಿಲ್ಲ. ಫೆ.21ರ ಬೆಳಗ್ಗೆ 6:30ಸುಮಾರಿಗೆ ಬಸದಿಯ ಅರ್ಚಕ ಶ್ರೀಕಾಂತ ಇಂದ್ರ ಪೂಜೆಗೆಂದು ಬಂದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿತ್ತು. ಗರ್ಭಗುಡಿಯ ಪೂರ್ವ ದಿಕ್ಕಿನಲ್ಲಿರುವ ಬಾಗಿಲು ಮತ್ತು ಕಬ್ಬಿಣದ ಗ್ರೀಲ್‌ಗೆ ಹಾಕಿದ ಬೀಗ ಮುರಿದು ಒಳನುಗ್ಗಿದ ಕಳ್ಳರು ದಿನನಿತ್ಯ ಪೂಜೆ ಮಾಡುವ ದೇವರ ಮೂರ್ತಿಗಳನ್ನು ಕಳವುಗೈದಿದ್ದರು. ಕಾರ್ಕಳ ಉಪವಿಭಾಗದ ಡಿವೈಎಸ್ಪಿ ಸುಮನ ಹಾಗೂ ಅಜೆಕಾರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗೋಣಿಚೀಲವನ್ನು ಇರಿಸಿ ಹೋಗುವ ವ್ಯಕ್ತಿಯನ್ನು ತುಂಬಾ ದೂರದಿಂದ ನೋಡಿರುವುದಾಗಿ ಸ್ಥಳೀಯರೊಬ್ಬರು ತಿಳಿಸಿದ್ದರೂ, ಆತನ ಬಗ್ಗೆ ಯಾವುದೇ ಕುರುಹು ನೀಡಲು ಅಸಮರ್ಥರಾಗಿದ್ದಾರೆ.
ಅಜೆಕಾರು ಪೊಲೀಸರು ಪ್ರಕರಣದ ತನಿಖೆ ನಡೆಸುತಿದ್ದಾರೆ.