×
Ad

ಕಾನೂನು ಬಾಹಿರ ಪನಾಮಾ ಖಾತೆದಾರರಿಗೆ ಇನ್ನು ‘ನಿದ್ರೆಯಿಲ್ಲದ ರಾತ್ರಿಗಳು’: ಜೇಟ್ಲಿ

Update: 2016-04-08 23:10 IST

ಹೊಸದಿಲ್ಲಿ, ಎ.8: ಪನಾಮಾ ದಾಖಲೆಗಳಲ್ಲಿ ಬಹಿರಂಗಪಡಿಸಲಾಗಿರುವ ಸಾಗರೋತ್ತರ ಖಾತೆಗಳ ತನಿಖೆಗಾಗಿ ರೂಪಿಸಲಾಗಿರುವ ಬಹು-ಏಜೆನ್ಸಿ ಗುಂಪು ಪ್ರತಿಯೊಂದು ಖಾತೆಯನ್ನೂ ವಿಶ್ಲೇಷಿಸುತ್ತಿದೆ. ಕಾನೂನು ಬಾಹಿರ ಆಸ್ತಿಗಳನ್ನು ಹೊಂದಿರುವವರು ಇನ್ನು ‘ನಿದ್ರೆಯಿಲ್ಲದ ರಾತ್ರಿಗಳನ್ನು’ ಕಳೆಯ ಬೇಕಾಗುತ್ತದೆಂದು ಕೇಂದ್ರ ಅರ್ಥ ಸಚಿವ ಅರುಣ್ ಜೇಟ್ಲಿ ಗುರುವಾರ ಹೇಳಿದ್ದಾರೆ.

ಪನಾಮಾ ದಾಖಲೆಗಳು ಈ ವಾರ, ತೆರಿಗೆ ಸ್ವರ್ಗವೆಂದು ಪರಿಗಣಿಸಲಾಗಿರುವ ಪನಾಮಾದಲ್ಲಿ, ಸಾಗರೋತ್ತರ ಸಂಸ್ಥೆಗಳಲ್ಲಿ ಹಣ ಹೂಡಿರುವ ಖ್ಯಾತನಾಮರು ಹಾಗೂ ಕೈಗಾರಿಗೋದ್ಯಮಿಗಳು, ಸಹಿತ ಸುಮಾರು 500 ಮಂದಿ ಭಾರತೀಯರ ಹೆಸರುಗಳ ಪಟ್ಟಿಯೊಂದನ್ನು ಬಹಿರಂಗಪಡಿಸಿವೆ.

ಈಗ, ಈ ಪನಾಮಾ ಹೆಸರುಗಳು ಮುನ್ನೆಲೆಗೆ ಬಂದಿವೆ. ಕಳೆದ ಮೂರು ದಿನಗಳಲ್ಲಿ ತಾವು ಗುಂಪೊಂದನ್ನು ರಚಿಸಿದ್ದೇವೆ. ಯಾವುದು ಕಾನೂನು ಬದ್ಧ ಹಾಗೂ ಯಾವುದಲ್ಲವೆಂದು ಕಂಡು ಹಿಡಿಯಲು ತಾವು ಪ್ರತಿ ಖಾತೆಯನ್ನು ವಿಶ್ಲೇಷಿಸುತ್ತಿದ್ದೇವೆಂದು ಜೇಟ್ಲಿ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

ಕಾನೂನು ಬದ್ಧವಾದ ಖಾತೆಗಳನ್ನು ಹೊಂದಿರುವವರು ಚಿಂತಿಸಬೇಕಾಗಿಲ್ಲ. ಆದರೆ, ಕಾನೂನು ಬಾಹಿರ ಖಾತೆಗಳನ್ನು ಹೊಂದಿರುವವರು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯ ಬೇಕಾಗುತ್ತದೆಂದು ಅವರು ಕಠಿಣ ಎಚ್ಚರಿಕೆ ನೀಡಿದ್ದಾರೆ.

ಕಾನೂನು ಬಾಹಿರವಾಗಿ ಇರಿಸಿರುವ ಠೇವಣಿಗಳನ್ನು ಸಂಪೂರ್ಣವಾಗಿ ಪತ್ತೆ ಹಚ್ಚಲು ಪ್ರಯತ್ನಿಸುತ್ತೇವೆ. ಶೀಘ್ರವೇ ಎಲ್ಲವನ್ನೂ ಸ್ಪಷ್ಟಪಡಿಸಲಾಗುವುದೆಂಬುದು ತನ್ನ ಅಭಿಪ್ರಾಯವಾಗಿದೆಯೆಂದು ಜೇಟ್ಲಿ ಹೇಳಿದ್ದಾರೆ.

ಸಾಗರೋತ್ತರ ಖಾತೆಗಳಲ್ಲಿ ಹಣವಿರಿಸಿರುವ ಭಾರತೀಯರ ಹೆಸರುಗಳು ಸೋರಿಕೆ ದಾಖಲೆಗಳಲ್ಲಿ ಕಾಣಿಸಿಕೊಂಡೊಡನೆಯೇ, ಸರಕಾರವು ಭಾರತೀಯ ರಿಸರ್ವ್‌ಬ್ಯಾಂಕ್, ಆದಾಯ ತೆರಿಗೆ ಇಲಾಖೆ, ಆರ್ಥಿಕ ಗೂಢಚರ್ಯ ಘಟಕ, ವಿದೇಶಿ ತೆರಿಗೆ ಹಾಗೂ ತೆರಿಗೆ ಸಂಶೋಧನೆ ಸಂಸ್ಥೆಗಳ ಅಧಿಕಾರಿಗಳನ್ನೊಳಗೊಂಡ ತಂಡವೊಂದನ್ನು ರಚಿಸಿದೆ. ಅದು, ತೆರಿಗೆ ಸ್ವರ್ಗದಲ್ಲಿ ರಾಶಿ ಹಾಕಲಾಗಿರುವ ಹಣ ಕಾನೂನು ಬದ್ಧವೇ ಅಥವಾ ಕಾನೂನು ಬಾಹಿರವೇ ಎಂಬುದನ್ನು ತನಿಖೆ ಮಾಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News