‘ಭಾರತ್ ಮಾತಾ ಕಿ ಜೈ’ ಬಗ್ಗೆ ಫತ್ವಾದ ಅಗತ್ಯವಿಲ್ಲ
ಲಕ್ನೋ,ಎ.8: ‘ಭಾರತ್ ಮಾತಾ ಕಿ ಜೈ’ ಘೋಷಣೆಯ ಕುರಿತು ವಿವಾದಗಳು ಭುಗಿಲೆದ್ದಿರುವ ನಡುವೆಯೇ ಪ್ರಸಿದ್ಧ ಮುಸ್ಲಿಂ ಧಾರ್ಮಿಕ ವಿದ್ವಾಂಸ ಹಾಗೂ ಅಖಿಲ ಭಾರತ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನ ಸದಸ್ಯ ಖಾಲಿದ್ ರಶೀದ್ ಫರಂಗಿಮಹಲ್ ಅವರು ದಾರುಲ್ ಉಲೂಮ್‌ನಂತಹ ಧಾರ್ಮಿಕ ಸಂಸ್ಥೆಗಳು, ದೇಶ ಹಾಗೂ ಸಮುದಾಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ವಿಷಯಗಳ ಬಗ್ಗೆ ಫತ್ವಾಗಳನ್ನು ಹೊರಡಿಸುವುದರಿಂದ ದೂರ ಉಳಿಯಬೇಕೆಂದು ಆಗ್ರಹಿಸಿದ್ದಾರೆ.
ಲಕ್ನೋದಲ್ಲಿ ಶುಕ್ರವಾರ ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡುತ್ತಿದ್ದ ಅವರು ‘‘ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿರಿಸಿಕೊಂಡು ಎರಡು ಸಮುದಾಯಗಳ ಕೋಮುವಾದಿ ಶಕ್ತಿಗಳು ಈ ವಿವಾದವನ್ನು ಕೆದಕುತ್ತಿವೆ. ಇಂತಹ ಸೂಕ್ಷ್ಮ ಹಾಗೂ ರಾಜಕೀಯ ವಿಷಯದ ಬಗ್ಗೆ ಯಾವುದೇ ಧಾರ್ಮಿಕ ಸಂಸ್ಥೆಯು ಫತ್ವಾ ಹೊರಡಿಸಿದಲ್ಲಿ ಅದರಿಂದ ಕೋಮುವಾದಿ ಶಕ್ತಿಗಳಿಗೆ ಪ್ರಯೋಜನವಾಗಲಿದೆ. ನಾವು ಯಾಕೆ ಇಂತಹ ಸ್ಥಾಪಿತ ಹಿತಾಸಕ್ತಿಗಳ ಕೈಗಳಿಗೆ ಸಾಧನಗಳಾಗಬೇಕು’’ ಎಂದು ಅವರು ಹೇಳಿದ್ದಾರೆ.
ಯಾವುದೇ ಧಾರ್ಮಿಕ ಸಂಸ್ಥೆ ಕೂಡಾ ತನ್ನ ಮುಂದೆ ಪ್ರಸ್ತಾಪಿಸಲಾದ ಪ್ರತಿಯೊಂದು ವಿಷಯಕ್ಕೂ ಫತ್ವಾವನ್ನು ಹೊರಡಿಸಬೇಕೆಂದೇನಿಲ್ಲ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯರೂ ಆದ ರಶೀದ್ ಫರಂಗಿಮಹಲ್ ಹೇಳಿದ್ದಾರೆ. ಸ್ವಾತಂತ್ರ ಸಂಗ್ರಾಮದ ಕಾಲದಲ್ಲಿ ಮುಸ್ಲಿಮರು ‘ಇಂಕ್ವಿಲಾಬ್ ಝಿಂದಾಬಾದ್’ ಹಾಗೂ ‘ಜೈ ಹಿಂದ್’ ಘೋಷಣೆಗಳನ್ನು ಕೂಗಿದ್ದರೆಂದು ನೆನಪಿಸಿದ ಅವರು ‘ಭಾರತ್ ಮಾತಾ ಕಿ ಜೈ’ ಕೂಡಾ ಅಂತಹದೇ ಅರ್ಥವನ್ನು ಧ್ವನಿಸುತ್ತದೆ ಎಂದಿದ್ದಾರೆ. ಈ ಘೋಷಣೆಯನ್ನು ಕೂಗಿದಾಗ ಯಾರಿಗೂ ವಿಗ್ರಹದ ನೆನಪಾಗುವುದಿಲ್ಲ, ಬದಲಿಗೆ ದೇಶದ ಭೂಪಟವು ಮನಸ್ಸಿನಲ್ಲಿ ಮೂಡುತ್ತದೆಯೆಂದವರು ಹೇಳಿದರು.
ಭಾರತ್ ಮಾತಾ ಕಿ ಜೈ ಘೋಷಣೆಯು ಇಸ್ಲಾಂ ಧರ್ಮದ ಮೂಲಭೂತ ತತ್ವಗಳಿಗೆ ವಿರುದ್ಧವಾದುದರಿಂದ, ಮುಸ್ಲಿಮರು ಆ ಘೋಷಣೆಯನ್ನು ಕೂಗಬಾರದೆಂದು ಭಾರತದ ಅತಿ ದೊಡ್ಡ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ಸಂಸ್ಥೆಯಾದ ದಾರುಲ್ ಉಲೂಮ್ ದೇವ್ ಬಂದ್ ಕಳೆದ ವಾರ ಫತ್ವಾ ಹೊರಡಿಸಿತ್ತು. ಇಸ್ಲಾಂನ ಪ್ರಧಾನ ತತ್ವವಾದ ‘ಅಲ್ಲಾಹು ಒಬ್ಬನೇ ದೇವರು’ ಎಂಬ ಸಿದ್ಧಾಂತಕ್ಕೆ ಆ ಘೋಷಣೆಯು ವಿರುದ್ಧವಾಗಿದೆಯೆಂದು ಫತ್ವಾ ತಿಳಿಸಿತ್ತು.