×
Ad

ಬತ್ತಿದ ರಾಮಕುಂಡ; ಪುಣ್ಯಸ್ನಾನಕ್ಕಿಲ್ಲ ಒಂದು ಹನಿ ನೀರು!

Update: 2016-04-08 23:15 IST

139 ವರ್ಷಗಳಲ್ಲಿ ಇದೇ ಮೊದಲು

ಮುಂಬೈ, ಎ.8: ಮಹಾರಾಷ್ಟ್ರದ ಗೋದಾವರಿ ನದಿಯ ಪವಿತ್ರ ಸ್ನಾನದ ಸ್ಥಳ ರಾಮಕುಂಡ 139 ವರ್ಷಗಳಲ್ಲಿ ಮೊದಲ ಸಲ ಬತ್ತಿ ಹೋಗಿದೆ. ಗುಡಿ ಪಾಡ್ವಾ ಅಥವಾ ಚಾಂದ್ರಮಾನ ಯುಗಾದಿಯ ದಿನವಾದ ಇಂದು ಪವಿತ್ರ ಸ್ನಾನಕ್ಕಾಗಿ ನಾಸಿಕಕ್ಕೆ ಆಗಮಿಸಿದ್ದ ಸಾವಿರಾರು ಯಾತ್ರಿಕರಿಗೆ ಕೇವಲ ಕೆಸರು ನೀರಿನ ಸಣ್ಣ ಸಣ್ಣ ಹೊಂಡಗಳಷ್ಟೇ ಕಾಣಿಸಿವೆ.

ರಾಮಕುಂಡದಲ್ಲಿ ಪವಿತ್ರ ಸ್ನಾನ ಮಾಡ ಬಯಸುವವರಿಗೆ ಬಹುಶಃ ಜುಲೈವರೆಗೆ ಅದು ಸಾಧ್ಯವಾಗದೆಂದು ನಾಸಿಕ್ ಮಹಾನಗರ ಪಾಲಿಕೆಯ ಉಪ ಮೇಯರ್ ಗುರ್ಮೀತ್ ಬಗ್ಗಾ ಐಎಎನ್‌ಎಸ್‌ಗೆ ತಿಳಿಸಿದ್ದಾರೆ. ನಾಸಿಕ್‌ನ ಕುಂಭ ಮೇಳದ ವೇಳೆ ಪ್ರಮುಖ ಯಾತ್ರಾ ಸ್ಥಳವಾಗಿರುವ ರಾಮಕುಂಡವನ್ನು ತುಂಬಲು ನದಿಯ ದಡದಲ್ಲಿ ಕೊಳವೆ ಬಾವಿಗಳನ್ನು ಕೊರೆಸುವ ಚಿಂತನೆಯನ್ನು ನಗರಾಡಳಿತ ನಡೆಸಿದೆ.

ಶುಕ್ರವಾರ, ಮೂಲಭೂತ ವಿಧಿ ವಿಧಾನಗಳನ್ನು ನಡೆಸಲು ನೀರಿನ ವ್ಯವಸ್ಥೆ ಮಾಡುವಂತೆ ಪುರೋಹಿತರ ಸಂಘ ನಗರಾಡಳಿತಕ್ಕೆ ಮನವಿ ಮಾಡಿತ್ತು. ರಾತ್ರಿಯೇ ಟ್ಯಾಂಕರ್‌ಗಳ ಮೂಲಕ ರಾಮಕುಂಡವನ್ನು ತುಂಬಲಾಗಿದ್ದು, ಅಲ್ಲೀಗ ಮೊಣಕಾಲು ಮಟ್ಟದ ನೀರಿದೆ.

ಪ್ರಸ್ತುತ ನಾಸಿಕ್‌ನಲ್ಲಿ ಒಬ್ಬನಿಗೆ 100 ಲೀಟರ್‌ನಂತೆ ಪ್ರತಿದಿನ ನೀರು ಪೂರೈಸಲಾಗುತ್ತಿದೆ. ಆದರೆ, ನೀರಿನ ತೀವ್ರ ಕೊರತೆಯಿಂದಾಗಿ ಶೀಘ್ರವೇ ಈ ಪ್ರಮಾಣವನ್ನು ಕಡಿಮೆ ಮಾಡಬೇಕಾಗಬಹುದು. ಬಿರುಸಿನ ಮಳೆ ಆರಂಭವಾಗುವ ಜುಲೈವರೆಗೆ ನೀರನ್ನು ಉಳಿಸುವುದು ತಮ್ಮ ಗುರಿಯಾಗಿದೆಯೆಂದು ಬಗ್ಗಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News