ಮುಂದಿನ ವರ್ಷದಿಂದ ಜೆಇಇ ರ್ಯಾಂಕಿಂಗ್‌ಗೆ 12ನೆ ತರಗತಿಯ ಅಂಕಗಳ ಗಣನೆಯಿಲ್ಲ
ಕೇಂದ್ರ ಶಿಕ್ಷಣ ಸಚಿವಾಲಯದ ನಿರ್ಧಾರ
ಹೊಸದಿಲ್ಲಿ, ಎ.8: ಮುಂದಿನ ವರ್ಷದಿಂದ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಜಂಟಿ ಪ್ರವೇಶ ಪರೀಕ್ಷೆಯ (ಜೆಇಇ) ರ್ಯಾಂಕಿಂಗ್‌ನಲ್ಲಿ 12 ತರಗತಿಯ ಅಂಕಗಳನ್ನು ಪರಿಗಣಿಸಲಾಗುವುದಿಲ್ಲವೆಂದು ಸ್ಮತಿ ಇರಾನಿ ನೇತೃತ್ವದ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯವು ಗುರುವಾರ ತಿಳಿಸಿದೆ.
ಐಐಟಿ ಸಲಹಾ ಮಂಡಳಿಯು ರೂಪಿಸಿದ್ದ ಸಮಿತಿಯೊಂದು ಜೆಇಇ ಮಾದರಿಯಲ್ಲಿ ಬದಲಾವಣೆಗಳ ಬಗ್ಗೆ ಶಿಫಾರಸುಗಳನ್ನು ಮಂಡಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆಯೆಂದು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ಅಶೋಕ್ ಮಿಶ್ರಾ ಸಮಿತಿಯ ವರದಿ ಹಾಗೂ ಸಾರ್ವಜನಿಕ ಅಭಿಪ್ರಾಯಗಳನ್ನು ಪರಿಶೀಲಿಸಿದ ಬಳಿಕ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯವು 2017ಕ್ಕಾಗಿ ಜೆಇಇ ಮಾದರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ನಿರ್ಧರಿಸಿತು. ಜೆಇಇಯ ರ್ಯಾಂಕ್‌ಗಳ ನಿರ್ಧಾರಕ್ಕಾಗಿ 12ನೆ ತರಗತಿಯ ಅಂಕಗಳಿಗೆ ಶೇ.40ರಷ್ಟು ಮಾನ್ಯತೆ ನೀಡುವ ಹಾಲಿ ಕ್ರಮವನ್ನು ಕೈಬಿಡಲಾಗುವುದೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
12ನೆ ತರಗತಿಯ ಅಂಕಗಳು ಪರ್ಷೀಕೆಗೆ ಕುಳಿತುಕೊಳ್ಳುವ ಅರ್ಹತೆಯನ್ನು ನಿರ್ಧರಿಸಲಷ್ಟೇ ನಿರ್ಣಾಯಕ ಮಾನದಂಡವಾಗಿರುತ್ತದೆಂದು ಅವರು ಹೇಳಿದ್ದಾರೆ. ಜೆಇಇ ಪರೀಕ್ಷೆಗೆ ಅರ್ಹತೆ ಪಡೆಯ ಬೇಕಾದರೆ ವಿದ್ಯಾರ್ಥಿಗಳು 12ನೆ ತರಗತಿಯಲ್ಲಿ ಕನಿಷ್ಠ ಶೇ.75 ಅಂಕ ಅಥವಾ ಅಗ್ರ 20 ಶತಾಂಶ ವಿಭಾಗಗಳಲ್ಲಿರಬೇಕು. ಎಸ್ಸಿ-ಎಸ್ಟಿ ವಿದ್ಯಾರ್ಥಿಗಳು ಶೇ.65 ಅಂಕ ಪಡೆದಿರಬೇಕು.