×
Ad

ಶನಿ ದೇಗುಲದ ಗರ್ಭಗುಡಿ ಮಹಿಳೆಯರಿಗೆ ಮುಕ್ತ

Update: 2016-04-08 23:18 IST

ಅಹ್ಮದ್‌ನಗರ, ಎ.8: ಮಹಾರಾಷ್ಟ್ರದ ಶನಿ ಶಿಂಗಣಾಪುರ ದೇವಳದ ಗರ್ಭಗುಡಿಗೆ ಮಹಿಳೆಯರಿಗೆ ಪ್ರವೇಶ ನೀಡಲು ದೇವಳದ ಆಡಳಿತ ಮಂಡಳಿ ಇಂದು ನಿರ್ಧರಿಸಿದೆ. ಈ ಮೂಲಕ ಸುಮಾರು 400 ವರ್ಷಗಳಿಂದ ಇದ್ದ ಶನಿ ದೇಗುಲದೊಳಗೆ ಮಹಿಳೆಯರ ಪ್ರವೇಶ ನಿಷೇಧವಿನ್ನು ಚರಿತ್ರೆಯ ಪುಟಗಳನ್ನು ಸೇರಲಿದೆ.

ದೇವಳ ಪ್ರವೇಶಕ್ಕೆ ಮಹಿಳೆಯರಿಗೆ ತಾವು ಪ್ರೋತ್ಸಾಹವನ್ನೂ ನೀಡುವುದಿಲ್ಲ ಅಥವಾ ತಡೆಯುವುದೂ ಇಲ್ಲವೆಂದು ದೇವಸ್ಥಾನದ ಅಧಿಕಾರಿಗಳಿಂದು ತಿಳಿಸಿದ್ದಾರೆ. ಈ ನಿರ್ಧಾರದ ಬಗ್ಗೆ ದೇವಳದ ವಿಶ್ವಸ್ಥೆ ಶಾಲಿನಿ ಲಾಂಡೆ ವಿಶ್ವಸ್ಥ ಮಂಡಳಿಯ ಪರವಾಗಿ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಸಮಾಜ ಕಾರ್ಯಕರ್ತೆಯರು- ಮುಖ್ಯವಾಗಿ ತೃಪ್ತಿ ದೇಸಾಯಿ- ನಾಲ್ಕು ತಿಂಗಳುಗಳಿಂದ ಶನಿ ದೇವಳ ಪ್ರವೇಶಕ್ಕೆ ವಿಫಲ ಪ್ರಯತ್ನ ನಡೆಸಿದ್ದರು.
ಆಡಳಿತ ಮಂಡಳಿಯ ಈ ನಿರ್ಧಾರವನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಮಹಿಳಾ ಗುಂಪು ಭೂಮಾತಾ ರಣರಾಗಿಣಿ ಬ್ರಿಗೇಡ್‌ನ ಸದಸ್ಯೆಯರು ಸ್ವಾಗತಿಸಿದ್ದಾರೆ.

ವಿವಾದ ಶಮನಕ್ಕಾಗಿ ಆಡಳಿತ ಮಂಡಳಿ ಕಳೆದ ವಾರಾಂತ್ಯದಲ್ಲಿ ಪುರುಷರಿಗೂ ಗರ್ಭಗುಡಿಯೊಳಗೆ ಪ್ರವೇಶ ನಿಷೇಧಿಸಿತ್ತು. ಆದರೆ, ಇಂದು ನಸುಕಿನಲ್ಲಿ 100ರಷ್ಟು ಪುರುಷರು ಅದನ್ನುಲ್ಲಂಘಿಸಿ ಬಲಾತ್ಕಾರವಾಗಿ ಅಲ್ಲಿಗೆ ಪ್ರವೇಶಿಸಿದ್ದರು. ಮಹಿಳೆಯರಿಗೆ ದೇವಳ ಪ್ರವೇಶದ ಹಕ್ಕನ್ನು ನಿರಾಕರಿಸಲಾಗದೆಂದು ಬಾಂಬೆ ಹೈಕೋರ್ಟ್ ಆದೇಶ ನೀಡಿತ್ತು. ಮಹಿಳೆಯರನ್ನು ದೇವಳ ಪ್ರವೇಶಿಸದಂತೆ ತಡೆಯುವವರಿಗೆ 6 ತಿಂಗಳ ಸೆರೆವಾಸ ವಿಧಿಸುವ ಕಾನೂನು ಜಾರಿಗೊಳಿಸುವೆನೆಂದು ಮಹಾರಾಷ್ಟ್ರ ಸರಕಾರ ಹೈಕೋರ್ಟ್‌ಗೆ ವಾಗ್ದಾನ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News