ಮನಪಾ ಕಟ್ಟಡಕ್ಕೆ ಸೋಲಾರ್ ಅಳವಡಿಕೆಗೆ ಹಣದ ಕೊರತೆ!
ಮಂಗಳೂರು, ಎ.8: ದಕ್ಷಿಣ ಕನ್ನಡ ಜಿಲ್ಲೆಯನ್ನು ರಾಜ್ಯದ ಪ್ರಥಮ ಸೋಲಾರ್ (ಸೌರ ವಿದ್ಯುತ್) ಜಿಲ್ಲೆಯನ್ನಾಗಿ ಘೋಷಿಸಲು ಸಾಕಷ್ಟು ಪ್ರಯತ್ನಗಳು ಸಾಗುತ್ತಿರುವಂತೆಯೇ ಸರಕಾರಿ ಕಟ್ಟಡಗಳಲ್ಲಿ ಸೋಲಾರ್ ಅಳವಡಿಕೆಯೂ ನಡೆಯುತ್ತಿದೆ. ಈಗಾ ಗೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಲಾರ್ ಅಳವಡಿಸಿ ಬಳಕೆಯಾಗುತ್ತಿದ್ದರೆ, ಜಿಪಂ ಕಟ್ಟಡಕ್ಕೂ ಸೋಲಾರ್ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಆದರೆ, ಮಂಗಳೂರು ಮಹಾನಗರ ಪಾಲಿಕೆ ಕಟ್ಟಡಕ್ಕೆ ಸೋಲಾರ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದ್ದರೂ ಹಣದ ಕೊರತೆಯಿಂದ ಈ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕಿದೆ.
ಮನಪಾ ತನ್ನ ಮೂರು ಕಟ್ಟಡಗಳಿಗೆ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದಿಸಲು ಮುಂದಾಗಿತ್ತು. ಮೆಸ್ಕಾಂನ ನೆಟ್ ಮೀಟರಿಂಗ್ ಯೋಜನೆಯಡಿ ತಿಂಗಳಿಗೆ ಸುಮಾರು 96,000 ರೂ. ಉಳಿತಾಯದ ಗುರಿಯೊಂದಿಗೆ ಪ್ರಸ್ತಾವವನ್ನೂ ಸಿದ್ಧಪಡಿಸಿತ್ತು.
ಮನಪಾದ ಲಾಲ್‌ಬಾಗ್‌ನ ಪ್ರಮುಖ ಕಚೇರಿ ಕಟ್ಟಡ, ಮಲ್ಲಿಕಟ್ಟೆ ಮತ್ತು ಜೆಪ್ಪು ಮಾರುಕಟ್ಟೆಯ ಉಪ ಕಚೇರಿಗಳಿಗೂ ಸೋಲಾರ್ ಅಳವಡಿಕೆಯ ಪ್ರಸ್ತಾವ ಇದರಲ್ಲಿ ಸೇರಿತ್ತು. ಈ ಯೋಜನೆಯ ಅಂದಾಜು ವೆಚ್ಚ ಒಟ್ಟು 87.40 ಲಕ್ಷ ರೂ. ಆಗಿತ್ತು. ಲಾಲ್‌ಬಾಗ್‌ನಲ್ಲಿರುವ ಕಚೇರಿಗೆ 75 ಕಿಲೋವ್ಯಾಟ್ ಸಾಮರ್ಥ್ಯ, ಜೆಪ್ಪುವಿಗೆ 10 ಕಿಲೋ ವ್ಯಾಟ್ ಹಾಗೂ ಮಲ್ಲಿಕಟ್ಟೆ ಕಚೇರಿಗೆ 15 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಲು ಅಂದಾಜಿಸಲಾಗಿತ್ತು. ಮನಪಾದ ಲಾಲ್‌ಬಾಗ್‌ನ ಕಟ್ಟಡದಲ್ಲಿ ದಿನವೊಂದಕ್ಕೆ 700 ಯುನಿಟ್, ಜೆಪ್ಪು ಉಪ ಕಚೇರಿಯಲ್ಲಿ 40 ಯುನಿಟ್ ಹಾಗೂ ಮಲ್ಲಿಕಟ್ಟೆ ಯುನಿಟ್‌ನಲ್ಲಿ 150 ಯುನಿಟ್ ವಿದ್ಯುತ್ ದಿನವೊಂದಕ್ಕೆ ಖರ್ಚಾಗುತ್ತಿದೆ. ಹಾಗಾಗಿ 7,500 ಚದರ ಅಡಿ ಪ್ರದೇಶದಲ್ಲಿ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿ ಒಟ್ಟು ದಿನವೊಂದಕ್ಕೆ 400 ಯುನಿಟ್ ವಿದ್ಯುತ್ ಉತ್ಪಾದಿಸುವ ಗುರಿ ಈ ಯೋಜನೆಯದ್ದಾಗಿದೆ.