ಕಾಪು ಪುರಸಭೆ: 12 ಸಾಮಾನ್ಯ, 11 ಸೂಕ್ಷ್ಮ ಮತಗಟ್ಟೆಗಳು
ಉಡುಪಿ, ಎ.8: ಕಾಪು ಪುರಸಭೆಯ ಚೊಚ್ಚಲ ಚುನಾವಣೆಗೆ ದಿನ ನಿಗದಿಯಾಗಿದ್ದು, ನಾಮಪತ್ರ ಸಲ್ಲಿಸುವ ಪ್ರಕ್ರಿಯೆಗೆ ಚಾಲನೆ ದೊರೆತು ನಾಲ್ಕು ದಿನಗಳಾದರೂ ಇದುವರೆಗೆ ಒಂದೂ ನಾಮಪತ್ರ ಸಲ್ಲಿಕೆಯಾಗಿಲ್ಲ. ನಾಳೆಯಿಂದ ಮುಂದಿನ ಮೂರು ದಿನಗಳಲ್ಲಿ ನಾಮಪತ್ರಗಳ ಮಹಾಪೂರವೇ ಸಲ್ಲಿಕೆಯಾಗುವ ನಿರೀಕ್ಷೆ ಇದೆ.
ವಿಧಾನಸಭೆಯಲ್ಲಿ ಕಾಪು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ರಾಜ್ಯ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಅವರ ಅತ್ಯಾಸಕ್ತಿಯಿಂದಾಗಿ ಕಾಪು, ಉಳಿಯಾರಗೋಳಿ, ಮಲ್ಲಾರು ಗ್ರಾಪಂಗಳನ್ನು ಸೇರಿಸಿ ಕಾಪು ಪುರಸಭೆಯನ್ನು ತ್ವರಿತಗತಿಯಲ್ಲಿ ಅಸ್ತಿತ್ವಕ್ಕೆ ತರಲಾಗಿದೆ. ಪುರಸಭೆಯ ಒಟ್ಟು ಮತದಾರರ ಸಂಖ್ಯೆ 16,212. ಇವರಲ್ಲಿ ಸಾಮಾನ್ಯ ಮತದಾರರು 16,206 ಹಾಗೂ ಸೇವಾ ಮತದಾರರು 6 ಮಂದಿ. ಪುರಸಭಾ ವ್ಯಾಪ್ತಿಯಲ್ಲಿ ತೃತೀಯ ಲಿಂಗಿಗಳಿಲ್ಲ. ಪುರುಷರು 7,607 ಹಾಗೂ ಮಹಿಳೆಯರು 8,599 ಮಂದಿ.
ಕಾಪು ಪುರಸಭೆಯಲ್ಲಿ 23 ವಾರ್ಡ್‌ಗಳಿದ್ದು, 23 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಇವುಗಳಲ್ಲಿ 12 ಸಾಮಾನ್ಯ ಮತಗಟ್ಟೆಗಳಾದರೆ ಉಳಿದ 11 ಸೂಕ್ಷ್ಮ ಮತಗಟ್ಟೆಗಳು. ಬ್ರಹ್ಮಾವರದ ವಿಶೇಷ ತಹಶೀಲ್ದಾರ್ ಎಚ್.ಕೆ. ತಿಪ್ಪೇಸ್ವಾಮಿ ಹಾಗೂ ಉಡುಪಿ ತಾಪಂ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮಲ್ಲೇಶಪ್ಪ ಚುನಾವಣಾಧಿಕಾರಿಗಳಾಗಿ ನೇಮಕಗೊಂಡಿದ್ದಾರೆ. ಕಾಪುವಿನ ಸಹಾಯಕ ಕೃಷಿ ಅಧಿಕಾರಿ ವಾದಿರಾಜ ರಾವ್ ಹಾಗೂ ಉಡುಪಿ ಸಹಾಯಕ ತೋಟಗಾರಿಕಾ ಅಧಿಕಾರಿ ಗುರುಪ್ರಸಾದ್ ಸಹಾಯಕ ಚುನಾವಣಾಧಿಕಾರಿಗಳಾಗಿರುತ್ತಾರೆ.
ಕಾಪು ಪುರಸಭಾ ಚುನಾವಣೆಗೆ ವೀಕ್ಷಕರಾಗಿ ನೇಮಕಗೊಂಡಿರುವ ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಯೋಗೇಶ್ವರ್ ಚುನಾವಣೆಯ ಮೇಲುಸ್ತುವಾರಿಯನ್ನು ನೋಡಿಕೊಳ್ಳಲಿದ್ದಾರೆ. ನಾಮಪತ್ರಗಳನ್ನು ಕಾಪು ಪುರಸಭೆಯ ಕಾರ್ಯಾಲಯದಲ್ಲಿ ಬೆಳಗ್ಗೆ 10ರಿಂದ ಅಪರಾಹ್ನ 3ರವರೆಗೆ ಸ್ವೀಕರಿಸಲಾಗುತ್ತದೆ.
ಪುರಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಒಟ್ಟು 1.50 ಲಕ್ಷ ರೂ. ಖರ್ಚು ಮಾಡಲು ಅವಕಾಶವಿದೆ. ಸ್ಪರ್ಧಿಸಲಿಚ್ಛಿಸುವ ಸಾಮಾನ್ಯ ಅಭ್ಯರ್ಥಿಗಳು 1,000 ರೂ. ಹಾಗೂ ಹಿಂದುಳಿದ ವರ್ಗ, ಅನುಸೂಚಿತ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳು 500 ರೂ. ಠೇವಣಿಯನ್ನು ನೀಡಬೇಕಾಗಿದೆ. ಚುನಾವಣೆಗೆ ಎರಡು ಬಸ್, 2 ಮಿನಿ ಬಸ್, 6 ಮ್ಯಾಕ್ಸಿ ಕ್ಯಾಬ್ ಸೇರಿದಂತೆ ಒಟ್ಟು 10 ವಾಹನಗಳನ್ನು ಉಪಯೋಗಿಸಲಾಗುವುದು. ಪ್ರತಿ ಮತಗಟ್ಟೆಗೆ ತಲಾ ಒಬ್ಬ ಪಿಆರ್‌ಒ, ಎಪಿಆರ್‌ಒ ಹಾಗೂ ಇಬ್ಬರು ಪಿಒಗಳಿರುತ್ತಾರೆ. ಹೀಗೆ ಒಟ್ಟು 115 ಮತಗಟ್ಟೆ ಸಿಬ್ಬಂದಿಯನ್ನು ಚುನಾವಣೆಯ ಸಂದರ್ಭದಲ್ಲಿ ನಿಯೋ ಜಿಸಲಾಗುತ್ತದೆ.
ಮಸ್ಟರಿಂಗ್-ಡಿಮಸ್ಟರಿಂಗ್
ಎ.24ರಂದು ನಡೆಯುವ ಕಾಪು ಪುರಸಭೆ ಚುನಾವಣೆಗೆ ಉಡುಪಿ ತಾಲೂಕು ಕಚೇರಿಯಲ್ಲಿರುವ ಆಫೀಸರ್ಸ್‌ಕ್ಲಬ್ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ಕೇಂದ್ರವಾಗಿರುತ್ತದೆ. ಅದೇ ಭದ್ರತಾ ಕೊಠಡಿಯೂ ಆಗಿರುತ್ತದೆ. ಮತಗಳ ಎಣಿಕೆಯು ಎ.27ರಂದು ಉಡುಪಿ ತಾಲೂಕು ಕಚೇರಿಯ ಕೋರ್ಟ್ ಹಾಲ್‌ನಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ತಿಳಿಸಿದ್ದಾರೆ.