ಮಲ್ಪೆ: ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು
ಮಲ್ಪೆ, ಎ.8: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಗುರುವಾರ ರಾತ್ರಿ ಬೋಟಿನಲ್ಲಿ ಊಟ ಮಾಡಿ ಬಟ್ಟಲು ತೊಳೆಯುತ್ತಿದ್ದ ಸಮಯದಲ್ಲಿ ಆಕಸ್ಮಿಕವಾಗಿ ಕಾಲುಜಾರಿ ಬೋಟಿನಿಂದ ನೀರಿಗೆ ಬಿದ್ದು ವಿಠ್ಠಲ ತಿಂಗಳಾಯ (45) ಎಂಬ ಮೀನುಗಾರ ಮೃತಪಟ್ಟಿದ್ದಾರೆ.
ವಿಠಲ ತಿಂಗಳಾಯರು ಇತರ ಐವರೊಂದಿಗೆ ಕೃಷ್ಣ ಸುವರ್ಣ ಎಂಬವರ ಮಾಲಕತ್ವದ ಶ್ರೀ ದುರ್ಗಾ ಬೋಟಿನಲ್ಲಿ ಕೆಲಸ ಮಾಡುತ್ತಿದ್ದು, ರಾತ್ರಿ 8 ಗಂಟೆಗೆ ಮಲ್ಪೆಬಂದರಿಗೆ ಬಂದು ಮೀನು ಖಾಲಿ ಮಾಡಿ, ಪುನ: ಮೀನುಗಾರಿಕೆಗೆ ಬೋಟು ಹೊರಡುವ ಸಂದರ್ಭ ಘಟನೆ ಸಂಭವಿಸಿದೆ. ಬೋಟಿನೊಳಗೆ ಊಟ ಮಾಡಿ ಬಟ್ಟಲು ತೊಳೆಯುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಕಾಲುಜಾರಿ ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಮಲ್ಪೆಯ1ನೆ ದಕ್ಕೆಯ ಬೋಟು ನಿಲ್ಲುವ ಸ್ಥಳದಲ್ಲಿ ವಿಠ್ಠಲ ತಿಂಗಳಾಯರ ಮೃತದೇಹ ಪತ್ತೆಯಾಗಿದೆ. ವಿಠಲ ತಿಂಗಳಾಯರ ದೇಹ, ಮುಖದಲ್ಲಿ ಹಲವು ಗಾಯಗಳು ಕಂಡುಬಂದಿದ್ದು, ನೀರಿಗೆ ಬಿದ್ದ ಸಂದರ್ಭ ಇತರ ಬೋಟುಗಳು ಬಂದು ಹೋಗುತ್ತಿದ್ದುದರಿಂದ ಯಾವುದೋ ಬೋಟಿನ ಫ್ಯಾನಿನ ರೆಕ್ಕೆಗಳು ವಿಠ್ಠಲರಿಗೆ ಬಡಿದು ಗಾಯವಾಗಿರಬಹುದು ಎಂದು ಜನಾರ್ದನ ಬಂಗೇರ ಎಂಬವರು ಮಲ್ಪೆ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.